ಆಲ್ದೂರು ಗ್ರಾ.ಪಂ. ಅಧ್ಯಕ್ಷರ ರಾಜೀನಾಮೆ ತಿರಸ್ಕೃತಗೊಳಿಸುವಂತೆ ಮನವಿ…

81
firstsuddi

ಚಿಕ್ಕಮಗಳೂರು : ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸಲ್ಲಿಸಿರುವ ರಾಜೀನಾಮೆಯನ್ನು ತಿರಸ್ಕೃತಗೊಳಿಸುವಂತೆ ಗ್ರಾಮ ಪಂಚಾಯಿತಿ ಸದಸ್ಯ ಡಿ.ಬಿ.ಅಶೋಕ್ ಉಪವಿಭಾಗಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಉಪವಿಭಾಗಾಧಿಕಾರಿ ಕಛೇರಿಯ ವ್ಯವಸ್ಥಾಪಕ ರಾಘವೇಂದ್ರ ಅವರನ್ನು ಇಂದು ಕಾಂಗ್ರೇಸ್ ಮುಖಂಡರೊಂದಿಗೆ ಭೇಟಿ ಮಾಡಿದ ಅವರು ಈ ಸಂಬಂಧ ಮನವಿ ಸಲ್ಲಿಸಿದರು.

ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜುಬೇಹಾ ಅವರು ಜನಪರವಾಗಿ ಮತ್ತು ಅಭಿವೃದ್ದಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ನಂತರದ ಕರಾರಿನಂತೆ 30 ತಿಂಗಳು ಅವರಿಗೆ ಅಧಿಕಾರ ನೀಡಬೇಕಾಗಿದ್ದರೂ ಕೆಲ ಪಟ್ಟಭದ್ರಹಿತಾಸಕ್ತಿಗಳು ಅವರ ಮೇಲೆ ಒತ್ತಡ ತಂದು ರಾಜೀನಾಮೆ ನೀಡುವಂತೆ ಮಾಡಿವೆ ಎಂದು ಆರೋಪಿಸಿದರು.

ಪಟ್ಟಭದ್ರ ಹಿತಾಸಕ್ತಿಗಳ ಒತ್ತಡದಿಂದಾಗಿ ಜುಬೇಹಾ ಅವರು ಜು.1 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಕಳೆದ 8 ತಿಂಗಳಿನಿಂದ ಉತ್ತಮ ಆಡಳಿತ ನೀಡಿರುವ ಅವರ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸ ಬಾರದು, ಅದನ್ನು ತಿರಸೃತಗೊಳಿಸಬೇಕು ಎಂದು ಆಗ್ರಹಿಸಿದರು.

ಕಿಸಾನ್ ಕಾಂಗ್ರೇಸ್ ಮುಖಂಡ ಅರೇನಳ್ಳಿ ಪ್ರಕಾಶ್, ಪದವೀಧರ ಕಾಂಗ್ರೇಸ್ ಅಧ್ಯಕ್ಷ ಪವನ್, ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಯಾಜ್ ಅಹಮದ್ ಹಾಜರಿದ್ದರು.