ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಪತ್ನಿ ನಿಧನ…

75
firstsuddi

ಲಕ್ನೋ: ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ಅವರು ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದಾಗಿ ಅವರನ್ನು ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮೂಲಗಳ ಪ್ರಕಾರ ಸಾಧನಾ ಗುಪ್ತಾ ಬಹಳ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸಾಧನಾ ಗುಪ್ತಾ ಅವರ ಪಾರ್ಥಿವ ಶರೀರವನ್ನು ಲಕ್ನೋಗೆ ತರಲಾಗುತ್ತಿದೆ. ಮುಲಾಯಂ ಸಿಂಗ್ ಯಾದವ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಅನಾರೋಗ್ಯದ ಕಾರಣ ಮುಲಾಯಂ ಸಿಂಗ್ ಯಾದವ್ ಕೂಡ ಇದೇ ಆಸ್ಪತ್ರೆಗೆ ದಾಖಲಾಗಿದ್ದರು.

ಸಾಧನಾ ಗುಪ್ತಾ ಅವರು ಮುಲಾಯಂ ಸಿಂಗ್ ಯಾದವ್ ರ 2ನೇ ಪತ್ನಿಯಾಗಿದ್ದರು. ಮುಲಾಯಂ ಸಿಂಗ್ ಯಾದವ್ ಅವರ ಮೊದಲ ಪತ್ನಿ ಮತ್ತು ಅಖಿಲೇಶ್ ಯಾದವ್ ಅವರ ತಾಯಿ ಮಾಲ್ತಿ ಯಾದವ್ 2003 ರಲ್ಲಿ ನಿಧನರಾಗಿದ್ದರು. ಆನಂತರ ಸಾಧನಾ ಗುಪ್ತಾ ಮುಲಾಯಂ ಸಿಂಗ್ ಯಾದವ್ ಅವರನ್ನು ವಿವಾಹವಾಗಿದ್ದರು. ಇದು ಸಾಧನ ಗುಪ್ತಾ ಅವರ ಎರಡನೇ ವಿವಾಹವೂ ಆಗಿತ್ತು. ಈ ಹಿಂದೆ ಫರೂಕಾಬಾದ್ ನ ಚಂದ್ರಪ್ರಕಾಶ್ ಗುಪ್ತಾ ಅವರನ್ನು ವಿವಾಹವಾಗಿದ್ದರು. ಆದರೆ ಮುದುವೆಯಾದ ಕೆಲವೇ ವರ್ಷಗಳ ನಂತರ ಅವರು ವಿಚ್ಛೇದನ ಪಡೆದರು.

ಸಾಧನಾ ಗುಪ್ತಾ ಪ್ರತೀಕ್ ಯಾದವ್ ಅವರ ತಾಯಿ. ಪ್ರತೀಕ್ ಯಾದವ್ ಅವರ ಪತ್ನಿ ಬಿಜೆಪಿ ನಾಯಕಿ ಅಪರ್ಣಾ ಬಿಷ್ತ್ ಯಾದವ್. ಪ್ರತೀಕ್ ಯಾದವ್ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ. ಆದರೆ ಅವರ ಪತ್ನಿ ಅಪರ್ಣಾ ಯಾದವ್ ರಾಜಕೀಯ ಪ್ರವೇಶಿಸಿ ಬಿಜೆಪಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.