ಬೆಂಗಳೂರು : ಪಶ್ಚಿಮ ಘಟ್ಟ ಕುರಿತಂತೆ ಪಶ್ಚಿಮ ಸಚಿವಾಲಯ ಕರಡು ಅಧಿಸೂಚನೆ ವಿರೋಧಿಸಿ ಇದೇ ಜುಲೈ 18 ರಂದು ಗೃಹ ಸಚಿವ ಆರಗ ಜ್ಞಾನೇಂದ್ರರವರು ಮಲೆನಾಡು ಶಾಸಕರ ಸಭೆ ಕರೆದಿದ್ದಾರೆ.
ಕಳೆದ ವಾರ ಅಧಿಸೂಚನೆ ಹೊರಡಿಸಿದ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯವೂ ಒಳಗೊಂಡಂತೆ ಒಟ್ಟು 56,826 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು, ಎರಡು ತಿಂಗಳು ಗಡುವು ನೀಡಲಾಗಿತ್ತು.
ಕರ್ನಾಟಕ ಸರ್ಕಾರ ಈ ಹಿಂದೆ ಆಡಿ ಕಸ್ತೂರಿರಂಗನ್ ಸಮಿತಿ ವರದಿಯನ್ನು ತಿರಸ್ಕರಿಸಿತ್ತು ಹಾಗೂ ತನ್ನ ನಿಲುವಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಿದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದೆಂಬ ಈ ಭಾಗದ ಶಾಸಕರ ಆಗ್ರಹವಾಗಿದೆ ಎಂದಿರುವ ಸಚಿವರು, ಜುಲೈ 18ರ ಸಭೆಯಲ್ಲಿ, ಅಧಿಸೂಚನೆಯನ್ನು ವಿರೋಧಿಸಿ, ಗೊತ್ತುವಳಿಯನ್ನು ಮಂಡನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ವಲಯ ಎಂದು ಘೋಷಿಸುವುದರಿಂದ ಆ ಭಾಗದಲ್ಲಿ ವಾಸಿಸುವ ಜನರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ. ಈ ಹಿನ್ನಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರ ಹಾಗೂ ಆ ಭಾಗದ ಜನತೆಯ ಒಕ್ಕೊರಲಿನ ವಿರೋಧವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಈ ಹಿಂದೆ ಸ್ಪಷ್ಟಪಡಿಸಿದರು.










