ಬೆಂಗಳೂರು : ಯಾವುದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ ಆದೇಶ ವಿಚಾರವಾಗಿ ಮಾತನಾಡಿದ ಅವರು, ನಿಷೇಧದ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ, ಸರ್ಕಾರಿ ನೌಕರರು ಬಹಳ ದಿನ ಹೇಳುತ್ತಿದ್ದರು. ಪಾಪ ಅವರೂ ಹೇಳುವುದರಲ್ಲೂ ಅರ್ಥ ಇದೆ. ಕೆಲವು ಹೆಣ್ಣುಮಕ್ಕಳದೆಲ್ಲ ಫೋಟೋ ತೆಗೆದು, ತೊಂದರೆ ಆಗಿತ್ತು. ಹೀಗಾಗಿ ಅವರು ಹೀಗೆ ಮಾಡಿದ್ರು. ಯಾರು ಏನಾದರೂ ಹೇಳಿಕೊಳ್ಳಲಿ, ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ಮೊದಲು ಯಾವ ರೀತಿ ಇತ್ತೋ, ಅದೇ ರೀತಿ ನಿಯಮ ಇರಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.
ಸರ್ಕಾರ ಒಂದು ವರ್ಷ ಪೂರೈಸಿದ್ದಕ್ಕೆ ದೊಡ್ಡಬಳ್ಳಾಪುರದಲ್ಲಿ ದೊಡ್ಡ ರ್ಯಾಲಿ ಮಾಡಲು ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರವಾಸ ಮಾಡ್ತೀನಿ ಎಂದು ಭರವಸೆ ಕೊಟ್ಟರು.
ನಿನ್ನೆ ಇಡೀ ದಿನ ಪ್ರಮುಖರ ಜೊತೆ ಚಿಂತನಾ ಸಭೆ ಮಾಡಿದ್ದೇವೆ. ಬರುವ ದಿನಗಳಲ್ಲಿ ಸರ್ಕಾರ ಹಾಗೂ ಪಕ್ಷ ಯಾವ ರೀತಿ ಸಮನ್ವಯತೆಯಿಂದ ಹೋಗಬೇಕು ಎಂದು ಚರ್ಚೆಯಾಗಿದೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸುವ ಬಗ್ಗೆ ಚರ್ಚೆಯಾಗಿದೆ ಎಂದು ವಿವರಿಸಿದರು.
ಸಭೆ ನಡುವೆ ನಿನ್ನೆ ಪ್ರವಾಹ ಪೀಡಿತ ಡಿಸಿಗಳ ಜೊತೆ ಮಾತಾಡಿದ್ದೇನೆ. ಅಲ್ಲಿನ ಸ್ಥಳೀಯ ನದಿಗಳ ಪ್ರವಾಹದ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ಮೂಲಭೂತ ಸೌಕರ್ಯಕ್ಕಾಗಿ 500 ಕೋಟಿ ಒದಗಿಸಿದ್ದೇನೆ. ಪ್ರವಾಹದ ಸಂದರ್ಭದಲ್ಲಿ ಯಾರು ತೊಂದರೆ ಗೀಡಾಗಿದ್ದಾರೆ, ಅವರ ನೆರವಿಗೆ ಸರ್ಕಾರ ಕೂಡಲೇ ಧಾವಿಸಲಿದೆ. ಆಮೇಲೆ ಸೂಕ್ತವಾದ ಪರಿಹಾರವನ್ನು ಕೂಡ ನಮ್ಮ ಸರ್ಕಾರ ಕೊಡಲಿದೆ ಎಂದು ಹೇಳಿದರು.










