ಬೆಂಗಳೂರು : ಗಾಂಧಿ ಕುಟುಂಬದ ಹೆಸರಲ್ಲಿ ಮೂರ್ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ. ಈಗ ಋಣ ತೀರಿಸುವ ಸಮಯ ಬಂದಿದೆ. ಋಣ ತೀರಿಸಿಲ್ಲ ಎಂದರೆ, ತಿನ್ನುವ ಅನ್ನದಲ್ಲಿ ಹುಳ ಬೀಳುತ್ತೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ಟೀಕೆಗಳ ಮಳೆಯನ್ನೇ ಸುರಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಕಾಂಗ್ರೆಸ್ ನ 60 ವರ್ಷದ ನಿಜ ಬಣ್ಣವನ್ನು ರಮೇಶ್ ಕುಮಾರ್ ಹೊರಹಾಕಿದ್ದಾರೆ. ನಮ್ಮ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ರು. ಇದೀಗ ಅವರ ಪಕ್ಷದವರೇ 3-4 ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾರೆಂದು ಹೇಳಿದ್ದಾರೆ. ಮೂರ್ನಾಲ್ಕು ತಲೆಮಾರು ಲೆಕ್ಕಾ ಹಾಕಿದರೆ ಶೇ 160ರಷ್ಟು ಕಮಿಷನ್ ಹೊಡೆದಿದ್ದಾರೆಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದರು.
ಕಾಂಗ್ರೆಸ್ ನ ಒಬ್ಬೊಬ್ಬರು ನಾಲ್ಕು ತಲೆಮಾರಿಗಾಗುವಷ್ಟು ಆಸ್ತಿ ಮಾಡಿದ್ದಾರೆ. ಅವರು ಮಾಯಿಲ್ ಮರಾಠಿ ಅಂದ್ರೆ ಕೋಲಾರ ಭಾಗದ ಮಂತ್ರವಾದಿ ಎಂದು ಕಿಡಿ ಕಾರಿದರು. ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ವ್ಯರ್ಥ ಪ್ರಯತ್ನ ಮಾಡ್ತಿದ್ರು. ರಮೇಶ್ ಕುಮಾರ್ ಅದಕ್ಕೆ ತಿಲಾಂಜಲಿ ಹಾಕಿದ್ದಾರೆ. ಭ್ರಷ್ಟಾಚಾರ ಬಗ್ಗೆ, ದೊಡ್ಡ ಹಗರಣದ ಬಗ್ಗೆ ಅವರೇ ಹೇಳಿದ್ದಾರೆ. ಸ್ಪೀಕರ್ ಆಗಿ ಅವರ ವರ್ತನೆ ಬಗ್ಗೆ ನಾನು ಸದನದಲ್ಲೂ ಹೇಳಿದ್ದೇನೆ. ಇಡೀ ದೇಶದಲ್ಲಿ ಯಾವ ಸ್ಪೀಕರ್ ಮಾಡದ ಗನಂಧಾರಿ ಕೆಲಸ ಅವರು ಮಾಡಿದರು ಎಂದು ಸಚಿವ ಸುಧಾಕರ್ ಅವರು ಟೀಕಿಸಿದರು.
ಯಾವ ಪುರುಷಾರ್ಥಕ್ಕೆ ಹೋರಾಟ ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದರು. ಈ ಹಿಂದೆ ನರೇಂದ್ರ ಮೋದಿ ಅವರ ವಿರುದ್ಧವೂ ತನಿಖೆ ಮಾಡಿಸಿದ್ದೀರಿ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ದೇವರ ಮಕ್ಕಳಾ?. ರೌಡಿ ನಲಪಾಡ್ ಕಳುಹಿಸುತ್ತೀರಾ ಹೋರಾಟಕ್ಕೆ. ಜಾತ್ಯತೀತ ಅಂತೀರಾ, ಜಾತಿ ಹೆಸರಲ್ಲಿ ಮತ ಕೇಳ್ತೀರಾ. ನಾಚಿಕೆ ಆಗಲ್ವಾ? ಎಂದು ಶಾಸಕ ರೇಣುಕಾಚಾರ್ಯ ಅವರು ಟೀಕಿಸಿದರು.
ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡಲು ಹೋದ್ರೆ ಹೀಗೆ ಆಗೋದು. ರಮೇಶ್ ಕುಮಾರ್ ಕರ್ನಾಟಕದಲ್ಲಿ ಅವರಿಗಿಂತ ಬುದ್ಧಿವಂತರು ಬೇರೆ ಯಾರೂ ಇಲ್ಲ ಅಂದುಕೊಂಡಿದ್ದಾರೆ. ಅತಿಯಾದ ಮಾತಿನಿಂದ ಭರವಸೆಗಳನ್ನು ಕಳೆದುಕೊಳ್ಳುತ್ತಾರೆ ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.










