ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇದೀಗ ಅತಿ ಹೆಚ್ಚು ಟ್ಯಾಕ್ಸ್ ಪಾವತಿಸುವ ಸೆಲೆಬ್ರಿಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ಅವರಿಗೆ ಮೆಚ್ಚುಗೆ ಪತ್ರ ನೀಡಲಾಗಿದೆ. ಇದರ ಫೋಟೋ ವೈರಲ್ ಆಗುತ್ತಿದೆ.
ಪ್ರತಿ ಸಿನಿಮಾಗೆ ಅಕ್ಷಯ್ ಕುಮಾರ್ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಲ್ಲಿ ನಟಿಸುವ ಮೂಲಕವೂ ಸಂಪಾದನೆ ಮಾಡುತ್ತಾರೆ. ದೇಶದ ಅನೇಕ ಕಡೆಗಳಲ್ಲಿ ಅಕ್ಷಯ್ ಕುಮಾರ್ ಆಸ್ತಿ ಹೊಂದಿದ್ದಾರೆ. ಸದ್ಯ ಅವರು ಸಿನಿಮಾ ಶೂಟಿಂಗ್ ಸಲುವಾಗಿ ಇಂಗ್ಲೆಂಡ್ ಗೆ ತೆರಳಿದ್ದಾರೆ. ಅಕ್ಷಯ್ ಕುಮಾರ್ ಪರವಾಗಿ ಅವರ ತಂಡದವರು ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರವನ್ನು ಸ್ವೀಕರಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರರ ಪೈಕಿ ಅಕ್ಷಯ್ ಗೆ ಈ ಗೌರವವನ್ನು ನೀಡಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದರು.










