ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಎರಡನೇ ಬಾರಿಗೆ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಜುಲೈ 21ರಂದು ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜುಲೈ 25ಕ್ಕೆ ವಿಚಾರಣೆಗೆ ಬರುವಂತೆ ಸಮನ್ಸ್ ಜಾರಿ ಮಾಡಿದ್ದರು. ಆದರೆ ಮತ್ತೆ ದಿನಾಂಕ ಬದಲು ಮಾಡಿ ಜುಲೈ 26ಕ್ಕೆ ವಿಚಾರಣೆಗೆ ಬರುವಂತೆ ಸೂಚಿಸಿದ್ದರು.
ಜುಲೈ 21ರಂದು ವಿಚಾರಣೆಗೆ ಹೋಗುವಾಗಲು ಅನಾರೋಗ್ಯದ ಕಾರಣಕ್ಕಾಗಿ ಮಗಳು ಪ್ರಿಯಾಂಕಾ ಗಾಂಧಿಯನ್ನು ಜೊತೆಯಲ್ಲಿ ಕರೆತರುವುದಾಗಿ ತಿಳಿಸಿದ್ದರು. ಇಡಿ ಅಧಿಕಾರಿಗಳು ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆ ವೇಳೆ ಪ್ರಿಯಾಂಕಾ ಗಾಂಧಿ ಕೂಡ ಉಪಸ್ಥಿತರಿದ್ದರು. ಇಂದು ಕೂಡ ಪ್ರಿಯಾಂಕಾ ಗಾಂಧಿ ತಾಯಿಯ ಜೊತೆ ಇಡಿ ಕಚೇರಿಗೆ ತೆರಳಲಿದ್ದಾರೆ.
ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಇದು ರಾಜಕೀಯ ದ್ವೇಷದ ನಡೆಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿದೆ.










