ಜೈಪುರ : ರಾಜಸ್ಥಾನದ ಧೋಲ್ ಪುರ ಜಿಲ್ಲೆಯ ಬರಿ ಎಂಬಲ್ಲಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
14 ವರ್ಷದ ಬಾಲಕಿ ಮೇಲೆ 6 ರಿಂದ 7 ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬೈಕಿನಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬ ಅವಳನ್ನು ಹತ್ತಿರದ ಟೋಲ್ ಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಆಕೆಯನ್ನು 6 ರಿಂದ 7 ಪುರುಷರು ಕರೆದೊಯ್ದಿದ್ದು, ಅತ್ಯಾಚಾರ ಮಾಡಿದ್ದಾರೆ. ಮೂವರು ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಸ್ತುತ ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬ್ಯಾರಿ ಸರ್ಕಲ್ ಆಫೀಸರ್ ಮನೀಶ್ ಶರ್ಮಾ ತಿಳಿಸಿದ್ದಾರೆ.
ಘಟನೆಯ ಕುರಿತು ವಿವರಿಸಿದ ಶರ್ಮಾ ಅವರು, ಸಂತ್ರಸ್ತ ಜುಲೈ 26 ರಂದು ಸಂಜೆ ಮಾರುಕಟ್ಟೆಗೆ ಹೋಗಿದ್ದಳು. ಅಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬ ಅವಳನ್ನು ತನ್ನ ಬೈಕ್ ನಲ್ಲಿ ಕುಳಿತುಕೊಳ್ಳುವಂತೆ ಆಮಿಷವೊಡ್ಡಿದ್ದಾನೆ. ಅದಕ್ಕೆ ಆಕೆ ಬೈಕ್ ಮೇಲೆ ಕುಳಿತುಕೊಂಡಿದ್ದಾಳೆ. ಆದರೆ ಬೆಸರಿ ರಸ್ತೆಯಲ್ಲಿರುವ ಟೋಲ್ ನಲ್ಲಿ ಅವಳನ್ನು ಬೀಳಿಸಿದ್ದಾನೆ. ತಕ್ಷಣ ಅಲ್ಲಿದ್ದ ಸುಮಾರು ಆರರಿಂದ ಏಳು ಜನರು ಆಕೆಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ರಾತ್ರಿಯಿಡೀ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಮರುದಿನ ದೇವಸ್ಥಾನದ ಬಳಿ ಬಿಟ್ಟು ಹೋಗಿದ್ದಾರೆ. ಆಕೆಯ ಕುಟುಂಬದವರು ಆಕೆಯನ್ನು ಹುಡುಕಿಕೊಂಡು ಹೋಗುವಾಗ ದೇವಸ್ಥಾನದಲ್ಲಿ ಪತ್ತೆಯಾಗಿದ್ದಾಳೆ. ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ. ಈ ಹಿನ್ನೆಲೆ ಕುಟುಂಬದವರು ಆರೋಪಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದಿದ್ದಾರೆ.










