ಕೊವ್ಯಾಕ್ಸಿನ್, ಕೋವಿಶೀಲ್ಡ್ ಪಡೆದವರಿಗೆ ಕೊರ್ಬೆವ್ಯಾಕ್ಸ್ ನೀಡಲು ಅನುಮತಿ…

50
firstsuddi

ನವದೆಹಲಿ : ಕೊವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್ ಆಗಿ ಬಯೋಲಾಜಿಕಲ್ ಇ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ.

18 ವರ್ಷ ಮೇಲ್ಪಟ್ಟವರು ಮತ್ತು ಎರಡು ಡೋಸ್ ಕೊವಿಡ್ ಲಸಿಕೆ ಪಡೆದವರು ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು. ಮೊದಲ ಎರಡು ಡೋಸ್ ಪಡೆದುಕೊಂಡ ಕಂಪನಿಗೆ ಹೊರತಾದ ಮತ್ತೊಂದು ಕಂಪನಿಯ ಬೂಸ್ಟರ್ ಡೋಸ್ ನೀಡಲು ಅವಕಾಶ ನೀಡಿರುವುದು ಭಾರತದಲ್ಲಿ ಇದೇ ಮೊದಲು.

ರಾಷ್ಟ್ರೀಯ ತಾಂತ್ರಿಕ ಲಸಿಕಾಕರಣ ಸಲಹಾ ಮಂಡಳಿ (National Technical Advisory Group on Immunisation – NTAGI)) ನೀಡಿರುವ ಶಿಫಾರಸು ಆಧರಿಸಿ ಕೇಂದ್ರ ಆರೋಗ್ಯ ಸಚಿವಾಲಯವು ಈ ನಿರ್ಧಾರ ತೆಗೆದುಕೊಂಡಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರು ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಪಡೆದ 6 ತಿಂಗಳು ಅಥವಾ 26 ವಾರಗಳ ನಂತರ ಕೊರ್ಬೆವ್ಯಾಕ್ಸ್ ಅನ್ನು ಮುನ್ನೆಚ್ಚರಿಕೆ ಡೋಸ್ ಆಗಿ ಹಾಕಿಸಿಕೊಳ್ಳಬಹುದು. ಕೊರ್ಬೆವ್ಯಾಕ್ಸ್ ವೈವಿಧ್ಯಮಯ ಕೋವಿಡ್ ಲಸಿಕೆಯಾಗಿರುವುದರಿಂದ ಈ ವಯೋಮಾನದವರಲ್ಲಿ ಹೆಚ್ಚಿನ ರೋಗ ನಿರೋಧಕತೆ ಉತ್ಪಾದಿಸಲು ಈ ಬೂಸ್ಟರ್ ಡೋಸ್ ನೆರವಾಗಲಿದೆ ಎಂದು ಹೇಳಲಾಗಿದೆ.

ಸ್ಥಳೀಯವಾಗಿ ಉತ್ಪಾದಿಸಲಾದ ಬಯೋಲಾಜಿಕಲ್ ಲಸಿಕೆಯಾದ ಕೊರ್ಬೆವ್ಯಾಕ್ಸ್ ಅನ್ನು ಈ ಮೊದಲು 12-14 ವರ್ಷದ ವಯೋಮಾನದ ಮಕ್ಕಳಿಗೆ ಮಾತ್ರ ನೀಡಲು ಅನುಮೋದಿಸಲಾಗಿತ್ತು.