ಬೆಂಗಳೂರು : ಈ ಸರ್ಕಾರದಲ್ಲಿ ಯುವಕರು ಸರ್ಕಾರಿ ನೌಕರಿ ಪಡೆಯಬೇಕು ಅಂದ್ರೆ ಲಂಚ ಕೊಡಬೇಕು. ಯುವತಿಯರು ನೌಕರಿ ಪಡೆಯಬೇಕು ಅಂದ್ರೆ ಮಂಚ ಹತ್ತಬೇಕಾಗಿದೆ ಎಂದು ಹೇಳಿದ್ದ ಪ್ರಿಯಾಂಕ್ ಖರ್ಗೆಯವರಿಗೆ ಬಿಜೆಪಿ ಟಾಂಗ್ ನೀಡಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ನಾಯಕರ ರಾತ್ರಿ ಬದುಕಿನ ರಂಗ-ಬಿರಂಗಿ ಬಗ್ಗೆ ಸಾಕಷ್ಟು ದಂತಕತೆಗಳು ಮಾತ್ರವಲ್ಲ, ಗುಪ್ತಸಿಡಿಗಳೂ ಇವೆ. ಜೂನಿಯರ್ ಖರ್ಗೆ ಅವರೇ, ಸಭ್ಯಸ್ಥರ ಮುಖವಾಡ ಹಾಕಿ ಸಮಾಜದ ಕಣ್ಣಿಗೆ ಗಣ್ಯರೆಂದು ಬಿಂಬಿಸಿಕೊಂಡ ಕಾಂಗ್ರೆಸ್ ಗೋಮುಖ ವ್ಯಾಘ್ರಗಳ ಪಟ್ಟಿ ನೀಡಿದರೆ ಸಮರ್ಥನೆ ಮಾಡಿಕೊಳ್ಳುವುದಕ್ಕೂ ನಿಮಗೆ ಕಷ್ಟವಾಗಬಹುದು ಎಂದಿದೆ.
ಸಾವಿರಾರು ಮಹಿಳೆಯರು, ಪ್ರತಿಭಾವಂತರು, ವಿದ್ಯಾವಂತರು ಕಷ್ಟಪಟ್ಟು, ಅನೇಕ ಪರೀಕ್ಷೆಗಳನ್ನು ಉತ್ತೀರ್ಣರಾಗಿ, ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮ ಈ ಮಾತುಗಳು, ಅಷ್ಟು ಜನ ಮಹಿಳೆಯರಿಗೆ ಅವಮಾನ ಮಾಡಿದಂತಲ್ಲವೇ ಎಂದು ಪ್ರಶ್ನಿಸಿ ಕೂಡಲೇ ಕ್ಷಮೆಯಾಚಿಸಿ ಎಂದು ಆಗ್ರಹಿಸಿದೆ.
ಪ್ರಿಯಾಂಕ್ ಖರ್ಗೆ ಅವರೇ, ಸಹಾಯ ಮಾಡುವುದಾಗಿ ನಂಬಿಸಿ ಅಸಹಾಯಕ ಹೆಣ್ಣೊಬ್ಬಳ ಮೇಲೆ ಮೇಟಿ ಲೈಂಗಿಕ ದೌರ್ಜನ್ಯ ಎಸಗಿದ್ದು ನಿಮ್ಮ ಕಾಲದಲ್ಲೇ ಅಲ್ಲವೇ? ಯುಪಿಎ ಸರ್ಕಾರದಲ್ಲಿ ಪ್ರಭಾವಿಗಳಾಗಿದ್ದ ಕಾಂಗ್ರೆಸ್ ನಾಯಕರು ಮಹಿಳೆಯರ ಮೇಲೆ ನಡೆಸಿದ ‘ದಿಗ್ವಿಜಯ’ ‘ಅಭಿಷೇಕ’ಗಳ ಸಿಡಿ ನಿಮ್ಮ ಮಂಚದ ಸರ್ಕಾರದ ಫಲವಲ್ಲವೇ? ಎಂದು ಪ್ರಶ್ನಿಸಿದೆ.
ಲಂಚ- ಮಂಚದ ಸರ್ಕಾರ ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಪ್ರಿಯಾಂಕ ಖರ್ಗೆಯವರಿಗೆ ‘ತಮ್ಮ ಮನೆಯ ಹೆಂಚು ತೂತು’ ಎಂಬುದೇ ಗೊತ್ತಿಲ್ಲ. ಇವರು ಆರೋಪ ಮಾಡಿದ ಬೆನ್ನಲ್ಲೇ, ಜಯಮಾಲಾ ಅವರ ಲಂಚದ ಹಗರಣ ಬಯಲಾಗಿದೆ. ಹಾಗಾದರೆ ಲಂಚದ ಸರ್ಕಾರ ಯಾರದ್ದು? ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಕಿಡಿಕಾರಿದೆ.










