ಚಿಕ್ಕೋಡಿ : ಕಾಲೇಜು ಬಸ್ ಹಾಗೂ ಗೂಡ್ಸ್ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಾಹನ ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 39 ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಲಾರಿ ಚಾಲಕರಾದ ಮಲ್ಲಿಕ್ ಮುಜಾವರ್ (40) ಹಾಗೂ ಕಾಲೇಜು ಬಸ್ ಚಾಲಕ ರಘುನಾಥ್ ಅವತಾಡೆ (45) ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಥಣಿ ಪಟ್ಟಣದಿಂದ ಕಾಲೇಜು ಕಡೆ ಬರುತ್ತಿದ್ದ ಬಸ್ ಹಾಗೂ ಕಾಗವಾಡ ಕಡೆಯಿಂದ ಅಥಣಿ ಕಡೆ ಬರುತ್ತಿದ್ದ ಗೂಡ್ಸ್ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ. ಬಣಜವಾಡ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು, ಈ ಬಸ್ ನಲ್ಲಿ 75 ವಿದ್ಯಾರ್ಥಿನಿಯರು ಹಾಗೂ 3 ಜನ ಸಿಬ್ಬಂದಿಗಳಿದ್ದರು.
ಅಪಘಾತದಲ್ಲಿ 39 ವಿದ್ಯಾರ್ಥಿನಿಯರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಓರ್ವ ಶಿಕ್ಷಕಿಗೆ ಗಂಭೀರ ಗಾಯವಾಗಿರುವ ಪರಿಣಾಮ ಬೆಳಗಾವಿಗೆ ರವಾನಿಸಲಾಗಿದೆ. ಹಾಗೂ ಇಬ್ಬರು ವಿದ್ಯಾರ್ಥಿನಿಯರಿಗೂ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










