ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ನಿಧನ…

62
firstsuddi

ಪಣಜಿ : ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಫೋಗಟ್ ತಮ್ಮ ಕಚೇರಿಯ ಕೆಲವು ಸಿಬ್ಬಂದಿಯೊಂದಿಗೆ ಗೋವಾಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಅಂಜುನಾದ ಗ್ರ್ಯಾಂಡ್ ಲಿಯೋನಿ ರೆಸಾರ್ಟ್ ನಲ್ಲಿ ಅವರು ಸಾವನ್ನಪ್ಪಿದ್ದಾರೆ. ಹರ್ಯಾಣದ ಫತೇಹಬಾದ್ ನ ಭುತಾನ್ ಗ್ರಾಮದಲ್ಲಿ ಮಧ್ಯಮ ಕುಟುಂಬದಲ್ಲಿ ಬೆಳೆದಿದ್ದ ಫೋಗಟ್ 2019ರಲ್ಲಿ ಚುನಾವಣೆ ಸ್ಪರ್ಧಿಸಿದ್ದರು. ಕುಲದೀಪ್ ಬಿಷ್ಣೋಯ್ ವಿರುದ್ಧ ಹರ್ಯಾಣದ ಆದಂಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋನಾಲಿ ಕಣಕ್ಕಿಳಿದಿದ್ದರು. ಬಿಷ್ಣೋಯ್ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರು.

ಸೋನಾಲಿ ಫೋಗಟ್ ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಮೂಲಕ ಸಖತ್ ಫೇಮಸ್ ಆಗಿದ್ದರು. ಅಲ್ಲದೇ ಬಿಗ್ ಬಾಸ್ ಸೀಸನ್ 14 ರ ಸ್ಪರ್ಧಿಯಾಗಿಯೂ ಅವರು ದೊಡ್ಮನೆ ಪ್ರವೇಶ ಮಾಡಿ ನೋಡುಗರನ್ನು ರಂಜಿಸಿದ್ದರು.