ರಸ್ತೆ ಅಪಘಾತ – ಪಂಜಾಬಿ ಜನಪ್ರಿಯ ಗಾಯಕ ನಿರ್ವೈರ್ ಸಿಂಗ್ ನಿಧನ…

66
firstsuddi

ಭೀಕರ ರಸ್ತೆ ಅಪಘಾತದಲ್ಲಿ ಪಂಜಾಬಿಯ ಜನಪ್ರಿಯ ಗಾಯಕ ನಿರ್ವೈರ್ ಸಿಂಗ್ ನಿಧನ ಹೊಂದಿದ್ದಾರೆ.

ಮೆಲ್ಬೋರ್ನ್ ಬಳಿ ಮೂರು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಈ ಅಪಘಾತದಲ್ಲಿ ಎರಡು ಮಕ್ಕಳ ತಂದೆಯಾಗಿರುವ, 42ರ ವಯಸ್ಸಿನ ನಿರ್ವೈರ್ ಸಿಂಗ್ ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾದ ಡಿಗ್ಗರ್ಸ್ ರೆಸ್ಟ್ ನಲ್ಲಿರುವ ಬುಲ್ಲಾ-ಡಿಗ್ಗರ್ಸ್ ರೆಸ್ಟ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಸೆಡಾನ್ ನ 23 ವರ್ಷದ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್ ನ ಕುರಾಲಿ ಪ್ರದೇಶದ ಸಿಂಗ್, ತಮ್ಮ ಗಾಯನ ವೃತ್ತಿಯನ್ನು ಮುಂದುವರಿಸಲು ಒಂಬತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಬಂದು ನೆಲೆಸಿದ್ದರು. ಒಂದಷ್ಟು ದಿನ ಟ್ಯಾಕ್ಸಿ ಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ನಿರ್ವೈರ್ ಒಬ್ಬ ಪ್ರಸಿದ್ಧ ಪಂಜಾಬಿ ಗಾಯಕ. ಅವರ ಮೈ ಟರ್ನ್ ಆಲ್ಬಂನ ತೇರೆ ಬಿನಾ ಹಾಡು ಬಹಳ ಜನಪ್ರಿಯವಾಗಿದೆ.