ಕೊಲಂಬೊ : ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದರಿಂದ ಜನರು ದಂಗೆ ಎದ್ದಿದ್ದರು. ಈ ವೇಳೆ, ಶ್ರೀಲಂಕಾದಿಂದ ಪಲಾಯನಗೈದಿದ್ದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಇಂದು ಮುಂಜಾನೆ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ತತ್ತರಿಸಿ ಹೋಗಿದ್ದ ಜನರು ಜುಲೈ 9ರಂದು ಕೊಲಂಬೊದಲ್ಲಿರುವ ರಾಜಪಕ್ಸ ಅವರ ಭವನ ಸೇರಿದಂತೆ ಅನೇಕ ಕಟ್ಟಡಗಳ ಮೇಲೆ ದಾಳಿ ನಡೆಸಿದ್ದರು. ಹೀಗಾಗಿ, ಜುಲೈ 13ರಂದು ಗೊಟಬಯ ಶ್ರೀಲಂಕಾದಿಂದ ಪಲಾಯನ ಮಾಡಿದ್ದರು.
ಶ್ರೀಲಂಕಾ ತೊರೆದಿದ್ದ ರಾಜಪಕ್ಸಗೆ ಸಿಂಗಾಪುರದಲ್ಲಿ 14 ದಿನಗಳ ಭೇಟಿಯ ಪಾಸ್ ನೀಡಲಾಗಿತ್ತು. ಅವರು ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಹೋಗಿ, ಬಳಿಕ ಥೈಲ್ಯಾಂಡ್ ಗೆ ತೆರಳಿದ್ದರು. ಇದೀಗ 2 ತಿಂಗಳ ಬಳಿಕ ರಾಜಪಕ್ಸ ಶ್ರೀಲಂಕಾಗೆ ಮರಳಿದ್ದಾರೆ. ಗೊಟಬಯ ರಾಜಪಕ್ಸ ರಾಜೀನಾಮೆ ನೀಡಿದ ಬಳಿಕ ಹಂಗಾಮಿ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ.










