ಚಿಕ್ಕಮಗಳೂರು : ಮೊಬೈಲ್, ಇಂಟರ್ ನೆಟ್ ಗಳ ಪ್ರಭಾವ ತಾರಕಕ್ಕೇರಿರುವ ಇಂದಿನ ಸಂದರ್ಭದಲ್ಲಿ ಜನರಲ್ಲಿ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಮಹತ್ವದ ಹೆಜ್ಜೆ ಇಟ್ಟಿದೆ.
ಕಂಪ್ಯೂಟರ್, ಮೊಬೈಲ್, ವಾಟ್ಸಪ್, ಫೇಸ್‍ಬುಕ್‍ಗಳಿಂದ ಜನರನ್ನು ಹೊರತಂದು ಅವರಲ್ಲಿ ಓದುವ ಹವ್ಯಾಸ ಬೆಳೆಸಿ ಆ ಮೂಲಕ ಜನರಲ್ಲಿ ವೈಚಾರಿಕತೆ ಬೆಳೆಸಲು ಪ್ರತಿಷ್ಠಾನ ಕುಂಭಕ ಓದುಗ ಬಳಗವನ್ನು ಹುಟ್ಟುಹಾಕಿದೆ.
ಆಧುನಿಕತೆ ಬೆಳೆದಂತೆಲ್ಲಾ ಗ್ರಾಮೀಣ ಜನರೂ ಸೇರಿದಂತೆ ಪ್ರತಿಯೊಬ್ಬರೂ ಮೊಬೈಲ್, ವಾಟ್ಸಪ್, ಫೇಸ್‍ಬುಕ್ ದಾಸರಾಗಿದ್ದು, ಅದರ ನಡುವೆ ಓದುವ ಹವ್ಯಾಸವನ್ನು ಬಹುತೇಕ ಬಿಟ್ಟಿದ್ದಾರೆ, ಇದರಿಂದಾಗಿ ಜನ ಮಾನಸಿಕ ಮತ್ತು ದೈಹಿಕವಾಗಿ ಜಡವಾಗುತ್ತಿರುವುದು ಎಲ್ಲೆಡೆ ಕಂಡು ಬರುತ್ತಿರುವ ಸಾಮಾನ್ಯ ಸಂಗತಿ.
ಈ ಬೆಳವಣಿಗೆಯಿಂದಾಗಿ ಸಮಾಜದಲ್ಲಿ ಓದುವ, ಬರೆಯುವ ಸಂಸ್ಕೃತಿ ಕಣ್ಮರೆಯಾಗುತ್ತಿದ್ದು, ಯುವ ಜನರ ಸಂಭಾಷಣೆಯಲ್ಲಿ ಬಾ ಮಚ್ಚ, ಹೋಗು ಮಚ್ಚ ಎಂಬ ಅಸಾಂಸ್ಕೃತಿಕ ಪದಗಳು ವಿಜೃಂಭಿಸುತ್ತಿವೆ.
ಈ ಸಂಸ್ಕೃತಿಗೆ ಕಡಿವಾಣ ಹಾಕಿ ಜನರಲ್ಲಿ ಮತ್ತೆ ಓದುವ ಅಭಿರುಚಿಯನ್ನು ಬೆಳೆಸಿ ಆ ಮೂಲಕ ಅವರಲ್ಲಿ ವೈಚಾರಿಕತೆ ಬೆಳೆಸುವ ನಿಟ್ಟಿನಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ಹುಟ್ಟುಹಾಕಿರುವ ಕುಂಭಕ ಓದುಗ ಬಳಗ ಕುಂದೂರಿನ ಬನವಾಸಿ ನಿವಾಸದಲ್ಲಿ ನಿನ್ನೆ ಕಾರ್ಯಾರಂಭ ಮಾಡಿತು.
ಬಳಗವನ್ನು ಉದ್ಘಾಟಿಸಿ ಮಾತನಾಡಿದ ಕಡೂರು ಮಾಜಿ ಶಾಸಕ ವೈಎಸ್‍ವಿ ದತ್ತಾ ಓದುವ ಹವ್ಯಾಸ ರೂಢಿಸಿಕೊಳ್ಳುವುದರಿಂದ ನಮ್ಮಲ್ಲಿ ಕ್ರಿಯಾಶೀಲತೆ, ವೈಚಾರಿಕತೆ ಬೆಳೆಯುತ್ತದೆ, ಆರೋಗ್ಯವಂತ ಸಮಾಜದ ನಿರ್ಮಾಣವಾಗುತ್ತದೆ ಎಂದರು.
ಪುಸ್ತಕದಿಂದ ಮಸ್ತಕ ಬೆಳೆಯುತ್ತದೆ ಎಂದ ಅವರು ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಜನ ತಮ್ಮ ಮನೆಯ ಕಪಾಟಿನಲ್ಲಿ ಕನಿಷ್ಠ 10 ಪುಸ್ತಕಗಳನ್ನಾದರೂ ಇಡಬೇಕು, ಪ್ರತಿದಿನ ಕನಿಷ್ಠ ಒಂದು ಪುಟವನ್ನಾದರೂ ಓದಬೇಕು ಎಂದು ಕಿವಿಮಾತು ಹೇಳಿದರು.
ಓದುಗ ಬಳಗವನ್ನು ಸೃಷ್ಠಿಸುವುದು ಒಂದು ಬಹುದೊಡ್ಡ ಕೆಲಸ, ಬಹುದೊಡ್ಡ ಸಾಹಸ, ಸಮಾಜದ ಆರೋಗ್ಯದ ದೃಷ್ಠಿಯಿಂದ ಇಂತಹ ಬಳಗಗಳು ಹೆಚ್ಚಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ ಮಾತನಾಡಿ ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದರಿಂದ ಸುಸಂಸ್ಕೃತ ಸಮಾಜದ ನಿರ್ಮಾಣವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಜನರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಓದುಗ ಬಳಗವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ತಿಂಗಳೂ ಬಳಗದ ಪ್ರತಿಯೊಬ್ಬರಿಗೂ ಒಂದೊಂದು ಸಾಹಿತ್ಯದ ಪುಸ್ತಕವನ್ನು ನೀಡಲಾಗುವುದು, ತಿಂಗಳ ಕೊನೆಯಲ್ಲಿ ಸಾಹಿತಿಯೊಂದಿಗೆ ಆ ಪುಸ್ತಕದ ಕುರಿತು ಓದುಗರಿಂದ ಸಂವಾದ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಹೇಶ್, ಪ್ರತಿಷ್ಠಾನದ ಸದಸ್ಯ ಕೆ.ಕೆ.ಜಗನ್ನಾಥ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಕೆ.ಭೈರೇಗೌಡ, ಹುಲಿಯಪ್ಪಗೌಡ, ಎಂ.ಎಂ.ದಯಾನಂದ್, ಶಿಕ್ಷಕ ಕೆ.ಎನ್.ಮೋಹನ್, ಉಪನ್ಯಾಸಕ ಕೆ.ಎಂ.ಪ್ರದೀಪ್, ದುರ್ಗೇಶ್, ತಿಮ್ಮೇಗೌಡ, ಕೃಷ್ಣಮೂರ್ತಿ, ಪರಮೇಶ್ ಉಪಸ್ಥಿತರಿದ್ದರು.










