ಯುವತಿಗೆ ಬಲವಂತವಾಗಿ ಚುಂಬಿಸಿದ ಫುಡ್ ಡೆಲಿವರಿ ಬಾಯ್ ಅರೆಸ್ಟ್…

68
firstsuddi

ಪುಣೆ: 19 ವರ್ಷದ ಯುವತಿಗೆ ಬಲವಂತವಾಗಿ ಚುಂಬಿಸಿದ ಫುಡ್ ಡೆಲಿವರಿ ಬಾಯ್ ಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಜೊಮ್ಯಾಟೊ ಡೆಲಿವರಿ ಬಾಯ್ ಯನ್ನು ರಯೀಸ್ ಶೇಖ್ (40 ವರ್ಷ) ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 17 ರಂದು ಪುಣೆಯ ಯೆವಾಲೆವಾಡಿಯಲ್ಲಿ ಈ ಘಟನೆ ನಡೆದಿದೆ. ಯುವತಿ ಶನಿವಾರ ರಾತ್ರಿ, ಜೊಮ್ಯಾಟೊ ಆ್ಯಪ್ ಮೂಲಕ ಆಹಾರವನ್ನು ಆರ್ಡರ್ ಮಾಡಿದ್ದರು. ಆರೋಪಿ ರಯೀಸ್ ಶೇಖ್ ರಾತ್ರಿ 9.30ರ ಸುಮಾರಿಗೆ ಫುಡ್ ಡೆಲಿವರಿ ಮಾಡಲೆಂದು ಯುವತಿ ಮನೆ ಇರುವ ಜಾಗಕ್ಕೆ ಬಂದಿದ್ದಾನೆ. ಫುಡ್ ಡೆಲಿವರಿ ಮಾಡಿದ ನಂತರ ಆರೋಪಿ ಯುವತಿಯೊಂದಿಗೆ ಸ್ನೇಹದಿಂದ ಮಾತನಾಡಲು ಆರಂಭಿಸಿ ಮನೆಯಲ್ಲಿರುವ ಕುಟುಂಬಸ್ಥರ ಬಗ್ಗೆ ವಿಚಾರಿಸಿದ್ದಾನೆ.

ಈ ವೇಳೆ ಯುವತಿ ತಾನು ತನ್ನ ರೂಮ್ ಮೇಟ್ ಗಳೊಂದಿಗೆ ವಾಸಿಸುತ್ತಿದ್ದೇನೆ ಆದರೆ ಅವರು ಪ್ರಸ್ತುತ ಮನೆಯಲ್ಲಿಲ್ಲ ಎಂದು ಹೇಳಿದಾಗ ಈ ಪರಿಸ್ಥಿತಿಯನ್ನೇ ಲಾಭವಾಗಿ ಮಾಡಿಕೊಂಡು ನೀರು ತರಲು ಯುವತಿಯನ್ನು ಕೇಳಿದ್ದಾನೆ. ಆಗ ಯುವತಿ ನೀರು ತರಲು ತಿರುಗುತ್ತಿದ್ದಂತೆಯೇ ಆರೋಪಿ ಆಕೆಯನ್ನು ಹಿಂದಿನಿಂದ ಹಿಡಿದುಕೊಂಡು ಕೆನ್ನೆಗೆ ಎರಡು ಬಾರಿ ಮುತ್ತಿಟ್ಟಿದ್ದಾನೆ. ನಂತರ ಮನೆಯಿಂದ ಹೊರಡುವ ಮುನ್ನ ಆರೋಪಿ, ನಾನು ನಿನ್ನ ಚಿಕ್ಕಪ್ಪನಿದ್ದಂತೆ ಎಂದು ಹೇಳಿ ಬೇಕಿದ್ದರೆ ತನ್ನನ್ನು ಸಂಪರ್ಕಿಸುವಂತೆ ಹೇಳಿದ್ದಾನೆ.

ಆರಂಭದಲ್ಲಿ ಯುವತಿ ಆರೋಪಿ ವಿರುದ್ಧ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೆ ಆತ ಯಾವಾಗ ಆಕೆಗೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಲು ಆರಂಭಿಸಿದನೋ ಆಗ ಯುವತಿ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೀಗ ಯುವತಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.