ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆ ಮಲಯಾಳಂನ ಸ್ಟಾರ್ ನಟಿ ಜೊತೆ ಅಭಿಮಾನಿಯೋರ್ವ ಅನುಚಿತವಾಗಿ ವರ್ತಿಸಿದ್ದಾನೆ.
ನಿನ್ನೆ ಕೋಝಿಕ್ಕೋಡ್ ನ ಹೈಲೈಟ್ ಮಾಲ್ ನಲ್ಲಿ ಹೊಸ ಚಲನಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಬಂದ ವೇಳೆ ಭಾರಿ ಸಂಖ್ಯೆಯ ಜನ ಜಮಾಯಿಸಿದ್ದರು. ಈ ವೇಳೆ ಅಭಿಮಾನಿಯೋರ್ವ ನಟಿಯನ್ನು ಎಳೆದುಕೊಂಡು ಮೈ ಮುಟ್ಟಿದ್ದಾನೆ. ಆಕೆಯ ಸಹನಟಿಗೂ ಕೂಡ ಇದೇ ಅನುಭವ ಆಗಿದೆ. ಕೂಡಲೇ ನಟಿ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಕೆಟ್ಟ ಅನುಭವದ ಬಗ್ಗೆ ನಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬೇಸರ ಹೊರಹಾಕಿದ್ದಾರೆ. ಕೋಯಿಕ್ಕೋಡ್ ನಾನು ಅತಿಯಾಗಿ ಪ್ರೀತಿಸುವ ನಗರ. ಆದರೆ ಕಾರ್ಯಕ್ರಮ ಮುಗಿಸಿ ಬರುವಾಗ ಗುಂಪಿನಲ್ಲಿದ್ದ ವ್ಯಕ್ತಿಯೋರ್ವ ನನ್ನನ್ನು ಎಳೆದುಕೊಂಡ. ಎಲ್ಲಿ ಮುಟ್ಟಿದ ಎಂದು ಹೇಳಲು ಅಸಹ್ಯವಾಗುತ್ತದೆ. ನಾವು ಪ್ರಮೋಷನ್ ಗಾಗಿ ಹಲವು ನಗರಗಳಿಗೆ ತೆರಳಿದ್ದೆವು. ಆದರೆ, ಈ ರೀತಿಯ ಅನುಭವ ಆಗಿರಲಿಲ್ಲ. ನನ್ನ ಸಹ ಕಲಾವಿದೆಗೂ ಇದೇ ರೀತಿಯ ಅನುಭವ ಆಗಿದೆ. ಆ ಕ್ಷಣ ಏನು ಮಾಡಬೇಕು ಎನ್ನುವುದೇ ನನಗೆ ಗೊತ್ತಾಗಲಿಲ್ಲ ಎಂದು ನಟಿ ಬರೆದುಕೊಂಡಿದ್ದಾರೆ.










