ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್​ಗೆ ಜಾಮೀನು ಮಂಜೂರು…

54
firstsuddi

ಮುಂಬೈ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹಾಗೂ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ(ಎನ್ ಸಿಪಿ) ನಾಯಕ ಅನಿಲ್ ದೇಶ್‌ಮುಖ್​ಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.

ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಮಾಡಿದ 100 ಕೋಟಿ ರೂಪಾಯಿ ವಸೂಲಿ ಆರೋಪದ ಮೇಲೆ ಅನಿಲ್ ದೇಶ್‌ಮುಖ್​ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಭ್ರಷ್ಟಾಚಾರ ಪ್ರಕರಣ ದಾಖಲಿಸಿತ್ತು. ನಂತರ 2021ರ ನವೆಂಬರ್ 2ರಂದು ಇಡಿ ಅಧಿಕಾರಿಗಳು ಅನಿಲ್ ದೇಶ್‌ಮುಖ್​ ಅವರನ್ನು ಬಂಧಿಸಿದ್ದರು.

ಇವರ ಜಾಮೀನು ಅರ್ಜಿಯು ಕಳೆದ ಆರು ತಿಂಗಳಿನಿಂದ ಬಾಕಿ ಉಳಿದಿರುವುದರಿಂದ ತ್ವರಿತವಾಗಿ ವಿಚಾರಣೆ ನಡೆಸಿ ತೀರ್ಮಾನಿಸುವಂತೆ ಸುಪ್ರೀಂಕೋರ್ಟ್ ಹೈಕೋರ್ಟ್ ಗೆ ಸೂಚಿಸಿತ್ತು. ಅಂತೆಯೇ, ನ್ಯಾಯಮೂರ್ತಿ ಎನ್​ಜೆ ಜಮಾದಾರ್ ಅವರು ಜಾಮೀನು ಅರ್ಜಿ ವಿಚಾರಣೆ ನಡೆಸಿದೆ.

ಮತ್ತೊಂದೆಡೆ ಇಡಿ ದೇಶ್‌ಮುಖ್​ ಅವರ ಜಾಮೀನನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿತ್ತು. ಅಲ್ಲದೇ, ಜಾಮೀನು ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲು ಕಾಲಾವಕಾಶ ನೀಡಬೇಕೆಂದು ಇಡಿ ಮನವಿ ಮಾಡಿತು. ಈ ಬೇಡಿಕೆಯನ್ನು ಅಂಗೀಕರಿಸಿದ ನ್ಯಾಯಾಲಯವು ತನ್ನ ಜಾಮೀನಿಗೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಿತು.

ಇನ್ನೊಂದೆಡೆ ಕಳೆದ ವರ್ಷ ಏಪ್ರಿಲ್ ನಲ್ಲಿ ಇವರ ವಿರುದ್ಧ ಸಿಬಿಐ ಇನ್ನೊಂದು ಪ್ರಕರಣ ದಾಖಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಅವರು ಜೈಲಿನಲ್ಲಿ ಇದ್ದಾರೆ. ಜಾಮೀನು ಸಿಕ್ಕರೂ ಅನಿಲ್ ದೇಶ್‌ಮುಖ್​ ಜೈಲಿನಲ್ಲೇ ಉಳಿಯಬೇಕಾಗಿದೆ.

ಪ್ರಕರಣದ ಹಿನ್ನೆಲೆ ಏನು? : ಕಳೆದ ಫೆಬ್ರವರಿ 25ರಂದು, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಆಂಟಿಲಿಯಾ ಹೊರಗೆ ಸ್ಫೋಟಕಗಳನ್ನು ತುಂಬಿದ ವಾಹನವು ಪತ್ತೆಯಾಗಿತ್ತು. ಈ ಕೃತ್ಯದ ಹಿಂದೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೆಸರು ಕೇಳಿಬಂದಿತ್ತು. ಇದಾದ ನಂತರ, ಮಹಾರಾಷ್ಟ್ರ ಸರ್ಕಾರವು ಆಗಿನ ಮುಂಬೈ ಪೊಲೀಸ್ ಕಮಿಷನರ್ ಪರಂಬಿರ್ ಸಿಂಗ್ ಅವರನ್ನು ಗೃಹರಕ್ಷಕ ದಳದ ಡಿಜಿಯನ್ನಾಗಿ ವರ್ಗಾವಣೆ ಮಾಡಿತ್ತು.

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಅನಿಲ್ ದೇಶ್ ಮುಖ್ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದರು. ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದು, ಅಮಾನತುಗೊಂಡ ಎಪಿಐ ಸಚಿನ್ ವಾಜೆ ಅವರಿಗೆ ಪ್ರತಿ ತಿಂಗಳು 100 ಕೋಟಿ ರೂ. ಹಫ್ತಾ ವಸೂಲಿ ಮಾಡುವಂತೆ ಅನಿಲ್ ದೇಶ್ ಮುಖ್ ಹೇಳಿದ್ದರು ಎಂದು ಆರೋಪಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ತಮ್ಮ ಗೃಹ ಸಚಿವ ಸ್ಥಾನಕ್ಕೆ ಅನಿಲ್ ದೇಶ್ ಮುಖ್ ರಾಜೀನಾಮೆ ನೀಡಿದ್ದರು.