ದಸರಾ ಜಂಬೂ ಸವಾರಿಗೆ ಕ್ಷಣಗಣನೆ ; ಅಂಬಾರಿ ಹೊರಲಿದ್ದಾನೆ ಅಭಿಮನ್ಯು.

57
firstsuddi

ಮೈಸೂರು : ಎರಡು ವರ್ಷ ಕೊರೊನಾದಿಂದ ಕಳೆಗುಂದಿದ್ದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಭಾರಿ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ. ಈ ಬಾರಿ ಜಾನಪದ ತಂಡ, ಸ್ತಬ್ಧ ಚಿತ್ರಗಳು ಹೆಚ್ಚು ಇರುವ ಕಾರಣ ಮೆರವಣಿಗೆಯಲ್ಲಿ ಹೆಚ್ಚು ಆನೆಗಳು ಭಾಗಿಯಾಗಲು ಕಷ್ಟವಾಗುವ ಹಿನ್ನೆಲೆ 9 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಮದ್ಯಾಹ್ನ 2.36 ರಿಂದ 02.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಂದಿ ಧ್ವಜ ಕಂಬಕ್ಕೆ ಪುಷ್ಪಾರ್ಚನೆ ಮಾಡುತ್ತಾರೆ. ನಂತರ ಪೂಜೆ ಬಳಿಕ ಸಂಜೆ 05.07 ರಿಂದ 5.18ರ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗುತ್ತದೆ. ಅರಮನೆಯಿಂದ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ.

ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನ ವಾಗಲಿವೆ. 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸಲಿವೆ. ಈ ಬಾರಿ ನಟ ದಿ. ಪುನೀತ್ ರಾಜಕುಮಾರ್ ಭಾವಚಿತ್ರ ಇರುವ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ.

ಜಂಬೂಸವಾರಿ ವೇಳೆ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಮೆರವಣಿಗೆಯ ಭದ್ರತೆಗಾಗಿ ಮೈಸೂರು ನಗರದ 1,255 ಪೊಲೀಸರು, ಹೊರ ಜಿಲ್ಲೆಯಿಂದ 3,580, ಗೃಹ ರಕ್ಷಕ ದಳದ 650 ಸಿಬ್ಬಂದಿ ಇರಲಿದ್ದಾರೆ. ಹೀಗೆ ಒಟ್ಟು 5,485 ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.