ಮಗಳ ಹೆರಿಗೆ ಹಿನ್ನೆಲೆ ; ಬಳ್ಳಾರಿಗೆ ಭೇಟಿ ನೀಡಲು ಜನಾರ್ದನ ರೆಡ್ಡಿಗೆ ಸುಪ್ರೀಂ ಅನುಮತಿ…

50
firstsuddi

ನವದೆಹಲಿ : ಮಾಜಿ ಸಚಿವ, ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಮಗಳ ಹೆರಿಗೆ ಹಿನ್ನೆಲೆ 2 ತಿಂಗಳ ಕಾಲ ಮಗಳ ಜೊತೆಗೆ ಇರಬೇಕಿದೆ. ಇದಕ್ಕಾಗಿ ಬಳ್ಳಾರಿಗೆ ತೆರಳಲು ಅನುಮತಿ ನೀಡಬೇಕು ಎಂದು ಕೋರಿದ್ದರು. ಆದರೆ ಅನುಮತಿ ನೀಡಲು ಸಿಬಿಐ ವಿರೋಧ ವ್ಯಕ್ತಪಡಿಸಿತ್ತು. ಸಿಬಿಐ ಆಕ್ಷೇಪದ ಬಳಿಕ ಕನಿಷ್ಠ 1 ತಿಂಗಳ ಕಾಲವಾದರೂ ಅನುಮತಿ ನೀಡಬೇಕು ಮತ್ತು ನನ್ನ ಮೇಲೆ ಪೊಲೀಸ್ ನಿಗಾ ಇಡಬಹುದು ಎಂದು ಜನಾರ್ದನ ರೆಡ್ಡಿ ಕೇಳಿಕೊಂಡಿದ್ದರು. ಇದೀಗ ಬಳ್ಳಾರಿಯಲ್ಲಿ ನವೆಂಬರ್ 6 ರವರೆಗೆ ಇರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. 

ಬಳ್ಳಾರಿಗೆ ತೆರಳಲು ಅನುಮತಿ ನೀಡಿದ್ದಲ್ಲದೇ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪ್ರತಿನಿತ್ಯ ವಿಚಾರಣೆಯನ್ನು ನಡೆಸುವಂತೆ ಮತ್ತು ನವೆಂಬರ್ 9 ರಿಂದ 6 ತಿಂಗಳಲ್ಲಿ ಸಂಪೂರ್ಣ ವಿಚಾರಣೆ ಪೂರ್ಣಗೊಳಿಸಲು ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. 

ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ರೆಡ್ಡಿ 2015ರಿಂದ ಜಾಮೀನಿನ ಮೇಲೆ ಹೊರಗಿದ್ದು, ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪಕ್ಕೆ ಭೇಟಿ ನೀಡದಂತೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹಲವು ಷರತ್ತುಗಳನ್ನು ವಿಧಿಸಿದೆ.