ಗುಜರಾತ್​ನ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಬಂಧನ…

40
firstsuddi

ನವದೆಹಲಿ: ಗುಜರಾತ್​ನ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಗೋಪಾಲ್ ಇಟಾಲಿಯಾ ಅವರ ಎರಡು ಹಳೆಯ ವಿಡಿಯೋಗಳು ವೈರಲ್ ಆಗಿದ್ದವು. ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರದ್ದು ನೀಚ ರಾಜಕೀಯ ಎಂದು ಟೀಕಿಸಿದ್ದರು. ಇನ್ನೊಂದು ವಿಡಿಯೋದಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಸೆರೆಯಾಗಿತ್ತು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ಗುಜರಾತ್ ಎಎಪಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರಿಗೆ ಸಮನ್ಸ್ ನೀಡಿತ್ತು. ಇದರ ಹಿನ್ನೆಲೆಯಲ್ಲಿ ಇಂದು ಗೋಪಾಲ್ ಇಟಾಲಿಯಾ ಮಹಿಳಾ ಆಯೋಗ ಕಚೇರಿಗೆ ಬಂದಿದ್ದರು. ಈ ವೇಳೆ ದೆಹಲಿ ಪೊಲೀಸರ ತಂಡ ಆಗಮಿಸಿ ಗೋಪಾಲ್ ಇಟಾಲಿಯಾ ವಶಕ್ಕೆ ಪಡೆದಿದ್ದಾರೆ.

ಇನ್ನು ಗೋಪಾಲ್ ಇಟಾಲಿಯಾ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಕಚೇರಿಯ ಒಳಗೆ ವಿಚಾರಣೆ ಎದುರಿಸುತ್ತಿದ್ದಾಗ ಕಚೇರಿ ಹೊರಗಡೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದರು.

ಈ ಕುರಿತಾಗಿ ಟ್ವೀಟ್ ಮಾಡಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು, ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ನನ್ನ ಕಚೇರಿ ಎದುರಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದಾಂಧಲೆ ಎಬ್ಬಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.