ಜಯಲಲಿತಾ ವೈದ್ಯಕೀಯ ಚಿಕಿತ್ಸೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ, ತನಿಖೆಗೆ ಸಿದ್ಧ : ಶಶಿಕಲಾ

70
firstsuddi

ಚೆನ್ನೈ : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಕುರಿತು ನ್ಯಾ. ಆರುಮುಗಸ್ವಾಮಿ ಆಯೋಗ ಸಲ್ಲಿಸಿದ ವರದಿ ನಿನ್ನೆ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಇದರಲ್ಲಿ ವಿ.ಕೆ ಶಶಿಕಲಾ, ಡಾ ಶಿವಕುಮಾರ್, ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರನ್ನು ತಪ್ಪಿತಸ್ಥರೆಂದು ಗುರುತಿಸಿದ್ದು, ಅವರ ವಿರುದ್ಧ ತನಿಖೆ ನಡೆಸಬೇಕೆಂದು ಆಯೋಗ ಶಿಫಾರಸು ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಎಐಎಡಿಎಂಕೆ ಉಚ್ಚಾಟಿತ ನಾಯಕಿ ಶಶಿಕಲಾ, ವರದಿಯಲ್ಲಿ ನನ್ನ ವಿರುದ್ಧ ಮಾಡಿರುವ ಎಲ್ಲ ಆರೋಪಗಳನ್ನು ನಾನು ನಿರಾಕರಿಸುತ್ತೇನೆ. ಜಯಲಲಿತಾ ಅವರ ವೈದ್ಯಕೀಯ ಚಿಕಿತ್ಸೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ, ನಾನು ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ.

ವರದಿಯಲ್ಲೇನಿದೆ? : 2016ರ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಆಸ್ಪತ್ರೆಯಲ್ಲಿ ದೀರ್ಘಾವಧಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನ್ಯಾ. ಆರುಮುಗಸ್ವಾಮಿ ವಿಚಾರಣಾ ಸಮಿತಿ ರಚಿಸಿತ್ತು.

ಆರುಮುಗಸ್ವಾಮಿ ಸಲ್ಲಿಸಿದ ವರದಿಯಲ್ಲಿ, ವೈದ್ಯಕೀಯ ಲೋಪವಾಗಿದೆ ಎಂಬ ಗಂಭೀರ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಜಯಲಲಿತಾ ಅವರು ಅನಾರೋಗ್ಯಕ್ಕೀಡಾದಾಗ ಯಾವ ಚಿಕಿತ್ಸೆ ನೀಡಲಾಗಿತ್ತು. ಅವರಿಗೆ ಏನಾಗಿತ್ತು ಎಂಬುದರ ಬಗ್ಗೆ ಗೌಪ್ಯವಾಗಿಡಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಕೂಡ ಇದನ್ನು ಬಹಿರಂಗಪಡಿಸಿಲ್ಲ. ಇಂತಹ ಹಲವಾರು ವೈದ್ಯಕೀಯ ದೋಷಗಳು ಕಂಡುಬಂದಿವೆ. ಇದಕ್ಕೆ ನೇರವಾಗಿ ಜಯಲಲಿತಾ ಅವರ ಆಪ್ತೆ ಶಶಿಕಲಾ, ಡಾ ಶಿವಕುಮಾರ್, ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಮತ್ತು ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರೇ ಕಾರಣರಾಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಸೂಚಿಸಲಾಗಿದೆ.