ಉಡುಪಿ : ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ ಎಂದು ಹೇಳಿಕೆ ನೀಡಿದ್ದ ನಟ ಚೇತನ್ ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ. ಅಲ್ಲದೇ ಬರವಣಿಗೆಯ ಮೂಲಕವೂ ನೋವು ತರುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ಇಂತಹ ಕೃತ್ಯಗಳನ್ನು ಮಾಡದಂತೆ ಅವರಿಗೆ ಎಚ್ಚರಿಕೆ ನೀಡಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಒತ್ತಾಯಿಸಿದೆ.
ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ ಎಂದು ಚೇತನ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಹೇಳಿಕೆ ಬಗ್ಗೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಚೇತನ್ ಅವರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದ್ದರು.










