ಚಿಕ್ಕಮಗಳೂರು : ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಮುಂದೊಂದು ದಿನ ನಡೆಯಬಹುದಾದ ಸಂಘರ್ಷವನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಅಗತ್ಯವಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಇಂದು ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಯುತ್ತಿದೆ, ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ, ಇದರಿಂದಾಗಿ ಸ್ಥಳೀಯರಿಗೆ ಸ್ವಲ್ಪ ಮಟ್ಟದ ಕಿರಿಕಿರಿಯೂ ಆಗುತ್ತಿದೆ, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಹೋದಲ್ಲಿ ಮುಂದೊಂದು ದಿನ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಸಂಘರ್ಷ ನಡೆಯುವ ಸಂಭವವಿದೆ, ಅದು ತಪ್ಪಬೇಕಾದರೆ ಸುಸ್ಥಿರ ಪ್ರವಾಸೋದ್ಯಮ ನೀತಿಯನ್ನು ರೂಪಿಸುವ ಕುರಿತು ಜಿಲ್ಲಾಡಳಿತ ಗಮನ ಹರಿಸಬೇಕಾಗಿದೆ ಎಂದರು.
ಬೇರೆ ಜಿಲ್ಲೆಗಳಿಗೆ ಅಭಿವೃದ್ದಿಯಲ್ಲಿ ನಾವು ಕಡಿಮೆ ಇದ್ದೇವೆ ಎನ್ನುವಂತಾಗಬಾರದು ಎಂಬ ದೃಷ್ಠಿಯಿಂದ ಜಿಲ್ಲೆಗೆ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ, ಚಿಕ್ಕಮಗಳೂರಿನ ಅಭಿವೃದ್ದಿಗೆ ನಾವು ಸಾಕಷ್ಟು ಹೆಜ್ಜೆ ಹಾಕಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘ ನಗರದಲ್ಲಿ ನಿರ್ಮಿಸುತ್ತಿರುವ ನೌಕರರ ಸಮುದಾಯ ಭವನಕ್ಕೆ ಹೆಚ್ಚುವರಿ ಮೂರು ಕೋಟಿ ಅನುದಾನ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ, ಸರ್ಕಾರಿ ನೌಕರರ ಓಪಿಎಸ್ ಮತ್ತು ಎನ್‍ಪಿಎಸ್ ಸ್ಕೀಂ ಬಗ್ಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ ಚಿಕ್ಕಮಗಳೂರಿನಲ್ಲಿ ಸರ್ಕಾರಿ ನೌಕರರ ಭವನವನ್ನು ನಿರ್ಮಿಸುವ ಚಿಂತನೆ ಹಲವು ವರ್ಷಗಳಿಂದ ಇತ್ತು, ಆರು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಮೂಲಕ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅದನ್ನು ನೆರವೇರಿಸಿದ್ದಾರೆ ಎಂದು ಶ್ಲಾಘಿಸಿದರು.
ನೌಕರರ ಭವನದ ನಿರ್ಮಾಣಕ್ಕೆ ಶಾಸಕ ಸಿ.ಟಿ.ರವಿ ಅವರ ಕಾಳಜಿ ಮತ್ತು ಶ್ರಮದಿಂದಾಗಿ ರಾಜ್ಯ ಸರ್ಕಾರ ನಾಲ್ಕು ಕೋಟಿ ರೂ ನೀಡಿದೆ. ಅದಕ್ಕಾಗಿ ಸಂಘ ಮತ್ತು ಸರ್ಕಾರಿ ನೌಕರರು ಶಾಸಕರಿಗೆ ಚಿರಋಣಿಯಾಗಿದ್ದಾರೆ, ಸಂಘ ಮತ್ತು ನೌಕರರು ಸದಾ ಅವರ ಜೊತೆಗಿರುತ್ತಾರೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾದ್ಯಕ್ಷ ದೇವೇಂದ್ರ ಶಾಸಕ ಸಿ.ಟಿ.ರವಿ ಅವರ ಸಹಕಾರದಿಂದಾಗಿ ನೌಕರರ ಭವನಕ್ಕೆ ಒಂದು ಕೋಟಿ ಅನುದಾನ ದೊರೆತಿದೆ ಇದರ ಜೊತೆಗೆ ಶಾಸಕರು ತಮ್ಮ ಅನುದಾನದಲ್ಲೂ ಹತ್ತು ಲಕ್ಷ ರೂ ನೀಡಿದ್ದಾರೆ, ಹಾಗಾಗಿ ನಾಡದೊರೆ ಪಟ್ಟದ ಸನಿಹದಲ್ಲಿರುವ ಶಾಸಕ ಸಿ.ಟಿ.ರವಿ ಅವರ ಹಿಂದೆ ಸದಾ ಸರ್ಕಾರಿ ನೌಕರರು ಹಾಗೂ ಸಂಘವಿರುತ್ತದೆ ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು, ಕಾರ್ಯಕ್ರಮಕ್ಕೆ ಮುನ್ನ ಶಾಸಕ ಸಿ.ಟಿ.ರವಿ ಅವರು ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ, ನೌಕರರ ಭವನ ಹಾಗೂ ರಿಯಾಯತಿ ದರದ ನೌಕರರ ಕ್ಯಾಂಟೀನ್ ಅನ್ನು ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ತಹಸೀಲ್ದಾರ್ ವಿನಾಯಕ ಸಾಗರ್, ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ಅದ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ಬಿ.ಬಿ.ಕಾಂತರಾಜು, ಅಧೀಕ್ಷಕ ಅಭಿಯಂತ ಕೆ ವೈ ಜಗಧೀಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಓಂಕಾರಸ್ವಾಮಿ, ಕಾರ್ಯದರ್ಶಿ ಸತ್ಯನಾರಾಯಣ, ಖಜಾಂಚಿ ಡಾ|| ಜಗದೀಶ್, ರಾಜ್ಯ ಪರಿಷತ್ ಸದಸ್ಯ ಎಸ್.ಬಿ.ಪೂರ್ಣೇಶ್, ಈಶ್ವರಪ್ಪ, ಕೃಷ್ಣಕುಮಾರ್, ಸುರೇಶ್, ಯೋಗೀಶ್, ರಾಜೇಂದ್ರ ಉಪಸ್ಥಿತರಿದ್ದರು.










