‘ಲೈಗರ್’ಗೆ ಬಂಡವಾಳ ಎಲ್ಲಿಂದ ಬಂತು? : ಪುರಿ ಜಗನ್ನಾಥ್, ಚಾರ್ಮಿ ಕೌರ್ ಗೆ ಇಡಿ ಗ್ರಿಲ್.

67
firstsuddi

ಟಾಲಿವುಡ್ ನಟ ವಿಜಯ್ ದೇವರಕೊಂಡ ನಟಿಸಿದ್ದ, ಪುರಿ ಜಗನ್ನಾಥ್ ನಿರ್ದೇಶನ ಮಾಡಿರುವ ಲೈಗರ್ ಸಿನಿಮಾ ಆಗಸ್ಟ್ 25ರಂದು ಸಿನಿಮಾ ತೆರೆ ಕಂಡಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ‘ಲೈಗರ್’ ಎಡವಿತು. ಪರಿಣಾಮವಾಗಿ ಬಾಕ್ಸ್ ಆಫೀಸ್ ನಲ್ಲೂ ಮುಗ್ಗರಿಸಿತು.

ನಿರ್ದೇಶಕ ಪುರಿ ಜಗನ್ನಾಥ್, ನಟಿ ಹಾಗೂ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಚಾರ್ಮಿ ಕೌರ್, ಕರಣ್ ಜೋಹರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಇದೀಗ ಈ ಸಿನಿಮಾಗೆ ಇಷ್ಟೊಂದು ಹಣ ಹೂಡಲು ಹೇಗೆ ಸಾಧ್ಯವಾಯ್ತು ಎಂಬ ಬಗ್ಗೆ ಅನುಮಾನ ಮೂಡಿದೆ. ಹಣದ ಮೂಲದ ಕುರಿತು ಈಗ ತನಿಖೆ ನಡೆಯುತ್ತಿದೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಆಗಿರುವ ಸಾಧ್ಯತೆ ಇರುವುದರಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಮೂಲಗಳ ಪ್ರಕಾರ, ನಿನ್ನೆ ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಿದ್ದಾರೆ. ಲೈಗರ್ ಸಿನಿಮಾದ ನಿರ್ಮಾಣಕ್ಕೆ ಹಣವನ್ನು ಎಲ್ಲಿಂದ ತಂದಿದ್ದೀರಿ? ಹಣದ ಮೂಲ ಏನು ಎಂದು ಸತತ 13 ಗಂಟೆಗಳ ಕಾಲ ಈ ಇಬ್ಬರನ್ನೂ ಇಡಿ ಅಧಿಕಾರಿಗಳು ಗ್ರಿಲ್ ಮಾಡಿದ್ದಾರೆ. 15 ದಿನದ ಹಿಂದೆಯೇ ಇಬ್ಬರಿಗೂ ನೋಟಿಸ್ ನೀಡಲಾಗಿತ್ತು ಎನ್ನಲಾಗಿದೆ.