ನವದೆಹಲಿ : ದರೋಡೆಕೋರ ಹಾಗೂ ಭಯೋತ್ಪಾದಕರ ಜಾಲ ಬೆನ್ನತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಬೆಳಗ್ಗೆ ಉತ್ತರ ಪ್ರದೇಶ, ಪಂಜಾಬ್, ದೆಹಲಿ, ರಾಜಸ್ಥಾನ ಮತ್ತು ಹರಿಯಾಣ ಸೇರಿ ಹಲವೆಡೆ ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಲಾರೆನ್ಸ್ ಬಿಷ್ಣೋಯ್, ನವೀನ್ ದಬಾಸ್ ಮತ್ತು ಸುನಿಲ್ ಬಲಿಯಾನ್ ಅಲಿಯಾಸ್ ಟಿಲ್ಲು ತಾಜ್ಪುರಿಯಾ ಎಂಬ ಮೂರು ದರೋಡೆಕೋರರನ್ನು ವಶಕ್ಕೆ ತೆಗೆದುಕೊಂಡಿದ್ದ ಎನ್ ಐಎ, ಪಂಜಾಬ್ ಮತ್ತು ರಾಜಸ್ಥಾನದಾದ್ಯಂತ ಕೂಡ ಕಾರ್ಯಾಚರಣೆ ನಡೆಸಿದೆ. ಕಳೆದ ತಿಂಗಳು ಕೂಡಾ ರಾಷ್ಟ್ರೀಯ ತನಿಖಾ ಸಂಸ್ಥೆ ಇದೇ ರೀತಿಯ ಶೋಧ ನಡೆಸಿತ್ತು.
ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದಲ್ಲಿ ಇತರ ರಾಜ್ಯಗಳಲ್ಲಿನ 50ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿ ದರೋಡೆಕೋರರಿಗೆ ಭಯೋತ್ಪಾದಕರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರೊಂದಿಗಿನ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆದಿತ್ತು. ರಾಜಸ್ಥಾನದ ಚುರು ಎಂಬಲ್ಲಿನ ಸಂಪತ್ ನೆಹ್ರಾ ಅವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಿದ ಬಗ್ಗೆ ವರದಿಯಾಗಿದೆ.










