ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಬಾಬಾ ಬುಡನ್ಗಿರಿ ದತ್ತ ಪೀಠದಲ್ಲಿ ಡಿ.6, 7, 8 ರಂದು ದತ್ತ ಜಯಂತಿಗೆ ಹೈಕೋರ್ಟ್ ಅನುಮತಿ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಆರಾಧೆ ಮತ್ತು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ಸರ್ಕಾರ ರಚನೆ ಮಾಡಿರುವ ಸಮಿತಿ ಭಕ್ತರಿಂದ ಪೂಜಾವಿಧಿ ವಿಧಾನ ನಡೆಸುವುದು, ದತ್ತ ಪಾದುಕೆ ಪೂಜೆ ಮಾಡಲು ಅನುಮತಿ ನೀಡಿ ವಿಚಾರಣೆಯನ್ನು 2023ರ ಜನವರಿ 12ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹಾಜರಾಗಿ, ಸರ್ಕಾರ ಈಗಾಗಲೇ ನಿರ್ವಹಣಾ ಸಮಿತಿ ರಚಿಸಿದೆ. ಹಿಂದೂ, ಮುಸ್ಲಿಂ ಸದಸ್ಯರ ಸಮಿತಿಯಿಂದ ಅರ್ಚಕ, ಮುಜಾವರ್ ನೇಮಕ ಮಾಡಲಾಗಿದೆ. ನಿತ್ಯ ಎರಡೂ ಸಮುದಾಯದವರು ಪೂಜೆ ನಡೆಸುತ್ತಿದ್ದಾರೆ. ಹೀಗಾಗಿ ದತ್ತ ಜಯಂತಿಗೆ ಅನುಮತಿ ನೀಡಲು ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ನ್ಯಾಯಪೀಠ ದತ್ತ ಜಯಂತಿ ಆಚರಣೆಗೆ ಅನುಮತಿ ನೀಡಿದೆ.










