ಮುಂಬೈ : ಇಲ್ಲಿನ ಖಾರ್ ಪ್ರದೇಶದಲ್ಲಿ ದಕ್ಷಿಣ ಕೊರಿಯಾದ ಯುವತಿಯೊಂದಿಗೆ ಇಬ್ಬರು ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ. ಕೊರಿಯಾದ ಮಹಿಳಾ ಯೂಟ್ಯೂಬರ್ ನೇರ ಪ್ರಸಾರ ಮಾಡುವಾಗ ಆಕೆಯ ಬಳಿ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಓರ್ವ ಪುಂಡ ಆಕೆಗೆ ಮುತ್ತು ಕೊಡುವಂತೆ ಬಲವಂತ ಮಾಡಿದ್ದು ಇದರಿಂದ ವಿಚಲಿತಳಾದ ಆಕೆ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೂ ಬಿಡದ ಆತ ಆಕೆಯನ್ನು ಬೈಕ್ ಮೇಲೆ ಕೂರುವಂತೆ ಒತ್ತಾಯಿಸಿದ್ದಾನೆ.
ಈ ವೇಳೆ ಆಕೆ ಆತನಿಂದ ತಪ್ಪಿಸಿಕೊಂಡು ಮುಂದಕ್ಕೆ ಹೋಗಿದ್ದು, ಆಕೆಯನ್ನು ಮತ್ತೆ ಹಿಂಬಾಲಿಸಿದ ಇಬ್ಬರು ಡ್ರಾಪ್ ಮಾಡುತ್ತೇನೆ ಬಾ ಎಂದು ಕೂಗುತ್ತಾರೆ. ಆದರೆ, ಆ ಮಹಿಳೆ ಅದನ್ನು ನಿರಾಕರಿಸಿದ್ದು, ನನ್ನ ಮನೆ ಸಮೀಪದಲ್ಲಿಯೇ ಇದೆ.. ನಾನು ಹೋಗುತ್ತೇನೆ ಎನ್ನುತ್ತಾಳೆ. ಬಳಿಕ ಅವರು ಮುಂದಿನ ಸಾರಿ ಭೇಟಿಯಾಗೋಣ ಎಂದು ಹೇಳಿದ್ದಾರೆ. ಈ ಘಟನೆ ಬಳಿಕ ಮಹಿಳಾ ಯೂಟ್ಯೂಬರ್ ವಿಚಲಿತಳಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಮಹಿಳೆಗೆ ಕಿರುಕುಳ ನೀಡಿದ ಇಬ್ಬರನ್ನು ಬಂಧಿಸಿದ್ದಾರೆ.










