ಜೈಪುರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಇಂದು ಪಾಲ್ಗೊಂಡಿದ್ದರು.
ಇಂದು ಬೆಳಗ್ಗೆ ಸವಾಯ್ ಮಾದೋಪುರ್ ಭಡೋತಿಯಿಂದ ಯಾತ್ರೆ ಆರಂಭವಾಗಿದ್ದು, ರಾಜನ್ ಸ್ವಲ್ಪ ಹೊತ್ತು ರಾಹುಲ್ ಜೊತೆ ಹೆಜ್ಜೆ ಹಾಕಿದ್ದಾರೆ. ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ 10ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬಮನ್ವಾಸ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಭಡೋತಿ ಗ್ರಾಮದಿಂದ ಯಾತ್ರೆ ಪುನಾರಂಭವಾಯಿತು. ಇಂದು ಯಾತ್ರೆ 25 ಕಿ.ಮೀ ದೂರ ಕ್ರಮಿಸಲಿದೆ.
ಸೆ. 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶದಲ್ಲಿ ಸಂಚರಿಸಿದ್ದು, ಇದೀಗ ರಾಜಸ್ಥಾನದಲ್ಲಿ ಮುಂದುವರಿಸಿದೆ. ಮುಂದಿನ ವರ್ಷ ಜನವರಿಯಲ್ಲಿ ಭಾರತ್ ಜೋಡೋ ಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.










