ನಟ ದುನಿಯಾ ವಿಜಯ್‍ಗೆ ಪೊಲೀಸರಿಂದ ನೋಟಿಸ್…

57
firstsuddi

ಪಾನಿಪುರಿ ಕಿಟ್ಟಿ ಜೊತೆಗಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರಿಗೆ ಹೈಗ್ರೌಂಡ್ ಪೊಲೀಸರು ನೋಟಿಸ್ ನೀಡಿದ್ದಾರೆ. ಪಾನಿಪುರಿ ಕಿಟ್ಟಿ ವಿರುದ್ಧ ದುನಿಯಾ ವಿಜಯ್ ದೂರು ನೀಡಿದ್ದರು. ದೂರುದಾರ ಆಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ.

ಈ ವಾರ ನಿಗದಿತ ಚಿತ್ರೀಕರಣ ಇರುವುದರಿಂದ ಮುಂದಿನ ವಾರ ವಿಚಾರಣೆಗೆ ಬರುವುದಾಗಿ ವಿಜಯ್ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಭೀಮ ಸೇರಿದಂತೆ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ವಿಜಯ್ ಭಾಗಿಯಾಗಿದ್ದಾರೆ. ಹಾಗಾಗಿ ಮುಂದಿನ ವಾರ ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.

ಏನಿದು ಪ್ರಕರಣ? : 2018ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ದೇಹದಾರ್ಢ್ಯ ಸ್ಪರ್ಧೆ ನಡೆದಿತ್ತು. ಈ ಸಂದರ್ಭದಲ್ಲಿ ಪಾನಿಪುರಿ ಕಿಟ್ಟಿ ಟೀಂಗೂ ಹಾಗೂ ದುನಿಯಾ ವಿಜಯ್ ಟೀಂ ಗೂ ಗಲಾಟೆ ನಡೆದಿತ್ತು. ಅಂದು ಸ್ಪರ್ಧೆ ಮಾಡಿದ್ದ ಪಾನಿಪುರಿ ಕಿಟ್ಟಿಯ ಸಹೋದರ ಮಾರುತಿ ಗೌಡನನ್ನು ಗಲಾಟೆ ನಂತರ ದುನಿಯಾ ವಿಜಯ್ ಕಾರಿನಲ್ಲಿ ಕರೆದುಕೊಂಡು ಹೋಗಿ, ಹಿಗ್ಗಾ ಮುಗ್ಗ ಥಳಿಸಿದ್ದರು ಎಂದು ಆರೋಪಿಸಲಾಗಿತ್ತು.

ನಂತರ ಮಧ್ಯರಾತ್ರಿ ಪೊಲೀಸರ ಕರೆ ಮೇರೆಗೆ ಮಾರುತಿ ಗೌಡ ಅವರನ್ನು ವಾಪಸ್ ಕರೆತಂದು ಬಿಡಲಾಗಿತ್ತು. ತೀವ್ರ ಥಳಿತಕ್ಕೊಳಗಾಗಿದ್ದ ಮಾರುತಿ ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಎರಡೂ ಕಡೆಯಿಂದಲೂ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ನನ್ನ ಮಗ ಸಾಮ್ರಾಟ್ ನಿಗೆ ಬೈದು ಬೆದರಿಕೆ ಹಾಕಿದ್ದಾರೆ ಎಂದು ವಿಜಯ್ ದೂರು ನೀಡಿದ್ದರು. ಪಾನಿಪುರಿ ಕಿಟ್ಟಿ ಅವರು ವಿಜಯ್ ಮೇಲೆ ಸೆಕ್ಷನ್ 307ರ ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್ ನಲ್ಲಿ ನಡೆಯುತ್ತಿದೆ.

ಸಾಕ್ಷ್ಯಗಳ ಕೊರತೆಯಿಂದ ಪಾನಿಪುರಿ ಕಿಟ್ಟಿಮೇಲೆ ನೀಡಿದ್ದ ದೂರು ಕ್ಲೋಸ್ ಮಾಡಲಾಗಿತ್ತು. ಇನ್ನೊಮ್ಮೆ ಕೇಸ್ ಮಾಡಿ, ತನಿಖೆ ನಡೆಸಲು ಕೋರ್ಟ್ ಆದೇಶ ಕೊಟ್ಟಿದೆ. ಕೋರ್ಟ್ ಸೂಚನೆ ಮೇಲೆ ಪಾನಿಪುರಿ ಕಿಟ್ಟಿ ಹಾಗೂ ಮಾರುತಿ ಗೌಡ ಮೇಲೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.