ನಾಲ್ಕು ಕಾಲಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ.

97
firstsuddi

ಭೋಪಾಲ್ : ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕಾಲು ಇರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.

ಸಿಕಂದರ್ ಕಂಪೂ ಪ್ರದೇಶದ ಆರತಿ ಕುಶ್ವಾಹ ಎಂಬ ಮಹಿಳೆ ಕಮಲರಾಜ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿನ ತೂಕ 2.3 ಕೆಜಿ ಇದ್ದು, ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜಯರೋಗ್ಯ ಆಸ್ಪತ್ರೆ ಸೂಪರಿಂಟೆಂಡೆಂಟ್ ಡಾ. ಆರ್.ಕೆ.ಎಸ್.ಧಕಡ್ ಮಾತನಾಡಿ, ನಾಲ್ಕು ಕಾಲಿರುವ ಮಗು ಜನಿಸಿದೆ. ಆ ಮಗುವಿಗೆ ಅಂಗ ವಿಕಲತೆ ಇದೆ. ಈ ರೀತಿಯ ಹೆಚ್ಚಿನ ಅಂಗಗಳೊಂದಿಗೆ ಜನಿಸುವ ಶಿಶುಗಳಿಗೆ ವೈದ್ಯಕೀಯ ವಿಜ್ಞಾನದ ಭಾಷೆಯಲ್ಲಿ ಇಶಿಯೋಪಾಗಸ್ ಎಂದು ಕರೆಯಲಾಗುತ್ತದೆ. ಈ ಹೆಣ್ಣು ಮಗುವಿನ ಸೊಂಟದ ಕೆಳಗಿನ ಭಾಗವು ಎರಡು ಹೆಚ್ಚುವರಿ ಕಾಲುಗಳೊಂದಿಗೆ ಅಭಿವೃದ್ಧಿಗೊಂಡಿದೆ. ಆದರೆ ಆ ಕಾಲುಗಳು ನಿಷ್ಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ಮಕ್ಕಳ ವಿಭಾಗದ ವೈದ್ಯರು ದೇಹದ ಯಾವುದೇ ಭಾಗದಲ್ಲಿ ಬೇರೆ ಯಾವುದೇ ವಿಕಾರವಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಮಗುವಿಗೆ ಯಾವುದೇ ಅಪಾಯವಿಲ್ಲ ಎಂದರೆ, ನಂತರ ಆ ಕಾಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಗುತ್ತದೆ. ಇದರಿಂದ ಮಗು ಮುಂದೆ ಸಹಜ ಜೀವನ ನಡೆಸಬಹುದು ಎಂದು ವೈದ್ಯರು ಹೇಳಿದ್ದಾರೆ.