ಪ್ರಶಾಂತ್ ಸಂಬರಗಿ ವಿರುದ್ಧ ಚಾರಿತ್ರ್ಯ ಹರಣ ಆರೋಪದಲ್ಲಿ ನಟಿ ಶೃತಿ ಹರಿಹರನ್ ಸಲ್ಲಿಸಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಯುತ್ತಿರುವ ಈ ಪ್ರಕರಣವನ್ನು ರದ್ದು ಕೋರಿ ಪ್ರಶಾಂತ್ ಸಂಬರಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ, ಸಂಬರಗಿ ವಿರುದ್ಧ ಪ್ರಕರಣಕ್ಕೆ ಮುಂದಿನ ವಿಚಾರಣೆವರೆಗೂ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದ್ದು, ಈ ವಿಚಾರಣೆಯನ್ನು 2023ರ ಫೆಬ್ರವರಿ 1ಕ್ಕೆ ಮುಂದೂಡಿದೆ.
ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ತಮ್ಮ ಮೇಲೆ ಲೈಂಗಿಕ ಕಿರುಕುಳ ಮಾಡಲಾಗಿದೆ ಎಂದು ಹೆಸರಾಂತ ನಟರೊಬ್ಬರ ಮೇಲೆ ನಟಿ ಶ್ರುತಿ ಹರಿಹರನ್ ಆರೋಪ ಮಾಡಿದ್ದರು. ಶ್ರುತಿ ಹರಿಹರನ್ ಮಾಡಿದ್ದ ಆರೋಪದ ಕುರಿತಂತೆ 2018ರ ಅಕ್ಟೋಬರ್ 25ರಂದು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆ ನಡೆದಿತ್ತು. ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಶ್ರುತಿ ಹರಿಹರನ್ ಮತ್ತು ನಟನಿಗೆ ಆಪ್ತರಾಗಿದ್ದ ಸಂಬರಗಿ ಹಾಜರಿದ್ದರು.
ಈ ನಡುವೆ ಸಂಬರಗಿ ವಿರುದ್ಧ ದೂರು ದಾಖಲಿಸಿದ್ದ ಶೃತಿ ಹರಿಹರನ್, ತನ್ನ ವಿರುದ್ಧ ಮಾಧ್ಯಮಗಳಲ್ಲಿ ಸಂಬರಗಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು, ಚಾರಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆಂದು ಆರೋಪಿಸಿದ್ದರು. ಸಂಬರಗಿ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.










