ನವದೆಹಲಿ : ಮೇ 13, 2022ರ ತೀರ್ಪಿನ ಮುರುಪರಿಶೀಲನೆಗಾಗಿ ಸಂತ್ರಸ್ತೆ ಬಿಲ್ಕಿಸ್ ಬಾನೋ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
2002 ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ, ಬಿಲ್ಕಿಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದಾಗ್ಯೂ, ಗುಜರಾತ್ ಸರ್ಕಾರವು 15 ವರ್ಷಗಳ ಜೈಲುವಾಸದ ನಂತರ ಅಪರಾಧಿಗಳನ್ನು ಬಿಡುಗಡೆ ಮಾಡಿತ್ತು.
ಮೇ 13 ರಂದು ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಅಪರಾಧಿಗಳ ಕ್ಷಮೆಯನ್ನು ಅಪರಾಧವು ನಿಜವಾಗಿ ಎಸಗಿರುವ ರಾಜ್ಯದಲ್ಲಿ ಶಿಕ್ಷೆಯ ಸಮಯದಲ್ಲಿ ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ ಪರಿಗಣಿಸಬೇಕು ಎಂದು ತೀರ್ಪು ನೀಡಿತ್ತು. ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಭಗವಾಂದಾಸ್ ಷಾ ಅವರು 1992ರ ಜುಲೈ 9 ರ ನೀತಿಯ ಅಡಿಯಲ್ಲಿ ಅವಧಿಪೂರ್ವ ಬಿಡುಗಡೆಗಾಗಿ ತನ್ನ ಅರ್ಜಿಯನ್ನು ಪರಿಗಣಿಸಲು ಗುಜರಾತ್ ರಾಜ್ಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ನ ತೀರ್ಪು ಬಂದಿತ್ತು.
ಬಿಲ್ಕಿಸ್ ಬಾನೋ ಅವರು ಕಳೆದ ಮೇ 13 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.










