ಶಿವಶರಣರ ಗಾಯನದಿಂದ ಮನಶ್ಯಾಂತಿ ದೊರೆಯುತ್ತದೆ : ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ.

95
firstsuddi

ಚಿಕ್ಕಮಗಳೂರು : ಹನ್ನೆರಡನೇ ಶತಮಾನದ ಶಿವಶರಣರ ವಚನಗಳು ಸಾರ್ವಕಾಲಿಕ ಸತ್ಯಗಳು ಎಂದು ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕರಡಿಗವಿ ಮಠದಲ್ಲಿ ಬೆಳವಾಡಿಯ ಶ್ರೀ ಬಸವೇಶ್ವರ ಭಜನಾ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ಏರ್ಪಡಿಸಿದ್ದ ವಚನ ಮತ್ತು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಶಿವಶರಣರ ವಚನಗಳು ಅನುಭವದ ಮೂಸೆಯಿಂದ ರಚನೆಯಾದಂತವು, ಅವುಗಳ ಗಾಯನದಿಂದ ಮನಶ್ಯಾಂತಿ ದೊರೆಯುತ್ತದೆ, ವಚನಗಳಲ್ಲಿ ಅಡಕವಾಗಿರುವ ತತ್ವ ಮತ್ತು ಸಂದೇಶಗಳನ್ನು ಪಾಲಿಸಿದಲ್ಲಿ ಸಮಾಜದಲ್ಲಿ ಭಾವೈಕ್ಯತೆ ಬೆಳೆಯುತ್ತದೆ, ಇಂದಿನ ರೋಗಗ್ರಸ್ತ ಸಮಾಜಕ್ಕೆ ವಚನಗಳು ದಿವ್ಯೌಷಧವಾಗಿವೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ಸಿ.ರಮೇಶ್ ವಚನ, ಭಕ್ತಿಗೀತೆ ಗಾಯನ ಹಾಗೂ ಜಾನಪದ ಕಾರ್ಯಕ್ರಮಗಳಿಗೆ ಮತ್ತು ಕಲಾವಿದರಿಗೆ ಇಲಾಖೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು, ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅದನ್ನು ಪಠ್ಯ ಪುಸ್ತಕಗಳಿಗೆ ಅಳವಡಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ವಿವಿಧ ತಂಡಗಳ ಕಲಾವಿದರಿಂದ ವಚನ ಗಾಯನ, ಜಾನಪದ ಗೀತೆಗಳ ಗಾಯನ ನಡೆಯಿತು, ಜಾನಪದ ಕಲಾವಿದರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸಿಂದಿಗೆರೆ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಮಾರ್ಗಾಬೋವಿ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಲತಾ ನಟರಾಜ್, ಬೆಳವಾಡಿ ಗ್ರಾ.ಪಂ. ಅಧ್ಯಕ್ಷೆ ಕೆ.ಎನ್.ಭಾಗ್ಯ, ಶ್ರೀ ಬಸವೇಶ್ವರ ಭಜನಾ ಕಲಾ ಸಂಘದ ಅಧ್ಯಕ್ಷ ಬಿ.ಪಿ.ಪರಮೇಶ್ವರಪ್ಪ, ಡಾ|| ವಿನಾಯಕ, ಗ್ರಾಮಾಭಿವೃದ್ದಿ ಅಧಿಕಾರಿ ಅರುಂಧತಿ ಉಪಸ್ಥಿತರಿದ್ದರು.