ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಸ್ಯಾಮ್ ಕರ್ರನ್ ಅವರು ದಾಖಲೆಯ 18.50 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಕರ್ರನ್ ಪಾಲಾಗಿದೆ.
ಸ್ಯಾಮ್ ಕರ್ರನ್ ಖರೀದಿಸಲು ಪಂಜಾಬ್ ಹಾಗೂ ಮುಂಬೈ ನಡುವೆ ಬಾರಿ ಜಿದ್ದಾಜಿದ್ದು ಕಂಡುಬಂತು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 18.50 ಕೋಟಿ ರೂ. ನೀಡಿ ಕರ್ರನ್ ರನ್ನು ಖರೀದಿಸಿತು. 2021 ರ ಹರಾಜಿನಲ್ಲಿ ಕ್ರಿಸ್ ಮೋರಿಸ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡವು 16.25 ಕೋಟಿಗೆ ಖರೀದಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಕರ್ರನ್ ಮುರಿದು ನೂತನ ದಾಖಲೆಯೊಂದಿಗೆ ಬಿಕರಿ ಆಟಗಾರನಾಗಿ ಹೊರ ಹೊಮ್ಮಿದ್ದಾರೆ.
ಸ್ಯಾಮ್ ಕರ್ರನ್ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಇಂಗ್ಲೆಂಡ್ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಟೂರ್ನಿಯ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಹಾಗಾಗಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಈ ನಿರೀಕ್ಷೆ ಹುಸಿಯಾಗಿದೆ.










