ವಂದೇ ಮಾತರಂ ಟ್ರಸ್ಟ್ ನಿಂದ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ…

65

ಚಿಕ್ಕಮಗಳೂರು : ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆಯನ್ನು ವಂದೇ ಮಾತರಂ ಟ್ರಸ್ಟ್ ನ ಪದಾಧಿಕಾರಿಗಳು ನಗರದಲ್ಲಿ ನಿನ್ನೆ ಅರ್ಥಪೂರ್ಣವಾಗಿ ಆಚರಿಸಿದರು.

ದೋಣಿಖಣದ ಶ್ರೀ ಕೊಲ್ಲಾಪುರದಮ್ಮನವರ ದೇವಾಲಯದ ಆವರಣದಲ್ಲಿ ಸಂಜೆ ಗೋಪೂಜೆ, ಯುಗಾಚಾರ್ಯ ವಿವೇಕಾನಂದರ ವಿಗ್ರಹಕ್ಕೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನೆರವೇರಿಸಿದರು.

ರಾಷ್ಟ್ರ ಕಲ್ಯಾಣ ಮತ್ತು ಕಂಟಕಗಳ ನಿವಾರಣೆಗೆ ಪ್ರಾರ್ಥಿಸಿ ಶ್ರೀ ದುರ್ಗಾ ಹೋಮ ಹಾಗೂ ರಾಷ್ಟ್ರರಕ್ಷಾ ಯಾಗವನ್ನು ನಡೆಸಲಾಯಿತು, ವೇದಬ್ರಹ್ಮ ಶ್ಯಾಮಭಟ್ಟರ ನೇತೃತ್ವದ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿತು.

ಭ್ರಷ್ಟಾಚಾರ ಮತ್ತು ದೇಶದ್ರೋಹವನ್ನು ಎಂದೂ ಮಾಡುವುದಿಲ್ಲ ಎಂಬ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳುವುದರ ಜೊತೆಗೆ ಯುವಜನತೆಗೆ ಸ್ವಾಮಿ ವಿವೇಕಾನಂದರ ಮಂತ್ರದೀಕ್ಷೆ ನೀಡಲಾಯಿತು.

ಇದೇ ವೇಳೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧ ಎಂ.ಎನ್.ಗಣೇಶ್ ಅವರ ಕುಟುಂಬಕ್ಕೆ ಟ್ರಸ್ಟ್ ನಿಂದ ಗೌರವ ಸಮರ್ಪಣೆ ಮಾಡಲಾಯಿತು.

ಕ್ರೀಡಾಪಟು ಪೋಲೀಸ್ ಇಲಾಖೆಯ ಟಿ.ಎಸ್.ಗಿರೀಶ್ ಅವರಿಗೆ ವಿವೇಕ ವೀರ ಬಿರುದು ನೀಡಿ ಸನ್ಮಾನಿಸಲಾಯಿತು. ಭಾರತ್ ಸ್ವಾಭಿಮಾನ್ ಟ್ರಸ್ಟ್ ನ ದಕ್ಷಿಣ ಕರ್ನಾಟಕದ ಪ್ರಭಾರಿಯಾಗಿ ಆಯ್ಕೆಯಾಗಿರುವ ಪವಿತ್ರ ಅವರನ್ನು ಅಭಿನಂದಿಸಲಾಯಿತು.

ವಂದೇ ಮಾತರಂ ಟ್ರಸ್ಟ್ ನ ಅಧ್ಯಕ್ಷ ಪ್ರೀತೇಶ್ ಮಾತನಾಡಿ ಯುವಜನತೆ ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರನ್ನು ಅನುಸರಿಸಿದರೆ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಅವರಿಗೆ ವಿವೇಕ ಮತ್ತು ಆನಂದ ಎರಡೂ ಲಭಿಸುವುದರ ಜೊತೆಗೆ ಅವರು ದೇಶಭಕ್ತರಾಗುತ್ತಾರೆ ಎಂದು ಕಿವಿಮಾತು ಹೇಳಿದರು.

ವಂದೇ ಮಾತರಂ ಟ್ರಸ್ಟ್ ನ ಉಪಾಧ್ಯಕ್ಷ ರೋಹಿತ್ ಕಾರ್ಯದರ್ಶಿ ಡಾ|| ವಿನಯ್, ನಿವೃತ್ತ ಯೋಧರಾದ ರಾಮಣ್ಣ, ಪ್ರಕಾಶ್, ದಾಸ ಸಾಹಿತ್ಯ ಪ್ರಾಜೆಕ್ಟ್ ನ ಜಿಲ್ಲಾ ಸಂಚಾಲಕ ಉದಯ ಸಿಂಹ, ಯೋಗ ವಿಸ್ಮಯ ಟ್ರಸ್ಟ್ ನ ಜಿ.ಅನಂತ್, ರಂಜಿತ್ ಶೆಟ್ಟಿ ಶಿಕ್ಷಕಿ ಇಂದಿರಾ ಉಪಸ್ಥಿತರಿದ್ದರು.