ನವದೆಹಲಿ : ಪ್ರಸ್ತುತ ಪೆರೋಲ್ ಮೇಲೆ ಜೈಲಿನಿಂದ ಹೊರಬಂದ ಅತ್ಯಾಚಾರ ಆರೋಪಿ, ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಮ್ ರಹೀಮ್ ಗೆ ಶನಿವಾರ ಹರಿಯಾಣದ ರೋಹ್ಟಕ್ ಜಿಲ್ಲೆಯ ಸುನಾರಿಯಾ ಜೈಲಿನಿಂದ 40 ದಿನಗಳ ಪೆರೋಲ್ ಪಡೆದಿದ್ದಾರೆ.
ಜಾಮೀನು ಅರ್ಜಿಯಲ್ಲಿ ರಾಮ್ ರಹೀಮ್, ಜನವರಿ 25 ರಂದು ಮಾಜಿ ಡೇರಾ ಮುಖ್ಯಸ್ಥ ಷಾ ಸತ್ನಾಮ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅವಕಾಶಕ್ಕೆ ಕೋರಿದ್ದರು.
ಸಿಂಗ್ ಕೇಕ್ ಕತ್ತರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐದು ವರ್ಷಗಳ ನಂತರ ಈ ರೀತಿ ಆಚರಿಸಲು ಅವಕಾಶ ಸಿಕ್ಕಿದೆ. ಹಾಗಾಗಿ ಕನಿಷ್ಠ ಐದು ಕೇಕ್ ಗಳನ್ನಾದರೂ ಕತ್ತರಿಸಬೇಕು. ಇದು ಮೊದಲ ಕೇಕ್ ಎಂದು ವಿಡಿಯೋದಲ್ಲಿ ಸಿಂಗ್ ಹೇಳಿಕೊಂಡಿದ್ದಾರೆ. ಸಿಂಗ್ ಖಡ್ಗದಿಂದ ಕೇಕ್ ಕತ್ತರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದ 14 ತಿಂಗಳಲ್ಲಿ ಇದು ನಾಲ್ಕನೇ ಬಾರಿ ಮತ್ತು ಮೂರು ತಿಂಗಳೊಳಗೆ ಎರಡನೇ ಬಾರಿಗೆ ರಾಮ್ ರಹೀಮ್ ಗೆ ಪೆರೋಲ್ ನೀಡಲಾಗಿದೆ. ಇದಕ್ಕೂ ಮೊದಲು, ಹರ್ಯಾಣ ಪಂಚಾಯತ್ ಚುನಾವಣೆ ಮತ್ತು ಆದಂಪುರ ವಿಧಾನಸಭಾ ಉಪಚುನಾವಣೆಗೆ ಮುಂಚಿತವಾಗಿ ಅವರನ್ನು ಅಕ್ಟೋಬರ್ 2022 ರಲ್ಲಿ 40 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.
ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 2017ರ ಆಗಸ್ಟ್ ನಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯ ಆತನಿಗೆ ಶಿಕ್ಷೆ ವಿಧಿಸಿತ್ತು.










