ಅರಣ್ಯ ಸಂಪತ್ತು ಲೂಟಿ ಆರೋಪ – ಆಲ್ದೂರು ಉಪವಲಯ ಅರಣ್ಯಾಧಿಕಾರಿ ದರ್ಶನ್ ಅಮಾನತು…

115
firstsuddi

ಚಿಕ್ಕಮಗಳೂರು : ಅರಣ್ಯವನ್ನ ರಕ್ಷಣೆ ಮಾಡಬೇಕಾದ ಅಧಿಕಾರಿ ಅರಣ್ಯ ಸಂಪತ್ತನ್ನ ಲೂಟಿ ಮಾಡಲು ಹೋಗಿ ಅಮಾನತು ಆಗಿರುವ ಘಟನೆ ತಾಲೂಕಿನ ಆಲ್ದೂರು ಮೀಸಲು ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಿಗನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟೆ ಮರವನ್ನ ಕಡಿದು ಮಾರಾಟ ಮಾಡಿದ್ದ ಆಲ್ದೂರು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಅವರನ್ನ ಅಮಾನತು ಮಾಡಿ ಡಿಎಫ್‍ಒ ಕ್ರಾಂತಿ ಆದೇಶ ಮಾಡಿದ್ದಾರೆ.

ಅನಿಗನಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೀಟೆ ಮರವನ್ನ ಅಕ್ರಮವಾಗಿ ಕಡಿದು ಮಾರಾಟ ಮಾಡಲಾಗಿದೆ ಎಂದು ಡಿಎಫ್‍ಒಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲಾಗಿತ್ತು. ಚಿಕ್ಕಮಗಳೂರು ಡಿಎಫ್‍ಒ ಕ್ರಾಂತಿ ನೇತೃತ್ವದಲ್ಲಿ ಮೀಸಲು ಅರಣ್ಯದಲ್ಲಿ ಬೀಟೆ ಮರ ಕಳ್ಳತನಕ್ಕೆ ಸಂಬಂಧಿಸಿದಂತೆ ಹರೀಶ್, ಪ್ರದೀಪ್, ಮಂಜು, ಬೇಲೂರಿನ ಮರದ ಮಿಲ್ಲಿನ ಮಾಲೀಕ ಸಿರಾಜ್ ನನ್ನ ಬಂಧನ ಮಾಡಿ ವಿಚಾರಣೆ ನಡೆಸಲಾಗಿತ್ತು.

ನಾಲ್ವರು ಆರೋಪಿಗಳು ತನಿಖೆಯ ವೇಳೆ ಆಲ್ದೂರು ಉಪವಲಯ ಅರಣ್ಯಾಧಿಕಾರಿ ದರ್ಶನ್ ಅವರೇ ಮರವನ್ನ ಕಡಿಸಿ ಮಾರಾಟ ಮಾಡಿರುವ ಕುರಿತು ಹೇಳಿಕೆ ನೀಡಿದ್ದರು. ಅರಣ್ಯ ಇಲಾಖೆಯ ತನಿಖೆಯ ವೇಳೆ ದರ್ಶನ್ ಮರವನ್ನ ಕಡಿದು ಮಾರಾಟ ಮಾಡಿರುವುದು ಸಾಬೀತಾದ ಹಿನ್ನೆಲೆ ನೋಟಿಸ್ ನೀಡಿ ಅಮಾನತು ಮಾಡಲಾಗಿದೆ.