ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಹಾಗೂ ಹಲವಾರು ಅಧಿಕಾರಿಗಳ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದ್ದಾರೆ.
10 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಬರ್ಟ್ ವಾದ್ರಾ, ಮಾಜಿ ಸಚಿವರಾದ ಕೆ. ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಯು. ಟಿ. ಖಾದರ್ , ಎಂ. ಬಿ. ಪಾಟೀಲ್, ಜಮೀರ್ ಅಹಮದ್, ದಿನೇಶ್ ಗುಂಡೂರಾವ್. ಎಂ. ಕೃಷ್ಣಪ್ಪ, ಎನ್.ಎ. ಹ್ಯಾರೀಸ್ ಹಾಗೂ ಪ್ರಿಯಾ ಕೃಷ್ಣ ವಿರುದ್ಧ ದೂರು ದಾಖಲಾಗಿದೆ. 9 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, 5 ಮಂದಿ ಕೆಎಎಸ್ ಅಧಿಕಾರಿಗಳು ಸೇರಿದಂತೆ 21 ಅಧಿಕಾರಿಗಳ ವಿರುದ್ಧ 3,728 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ 10 ದೂರುಗಳು ಸಲ್ಲಿಕೆಯಾಗಿದೆ. ಅಷ್ಟೇ ಅಲ್ಲದೇ 62 ಗಂಟೆಗಳ ಅವಧಿಯ ವೀಡಿಯೋ ತುಣುಕುಗಳು ಮತ್ತು 900ಕ್ಕೂ ಹೆಚ್ಚು ಛಾಯಾಚಿತ್ರಗಳನ್ನೊಳಗೊಂಡ 2 ಡಿವಿಡಿಗಳು ಬಿಡುಗಡೆಯಾಗಿವೆ.
ಈ ಬಗ್ಗೆ ರಮೇಶ್ ಕುಮಾರ್ ಮಾತನಾಡಿ, ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಒಂದೇ ಬಾರಿಗೆ 10 ಬೃಹತ್ ಹಗರಣ ಇದಾಗಿದ್ದು, ಬೃಹತ್ ಹಗರಣಗಳ ಲೋಕಾಯುಕ್ತರಿಗೆ ದೂರುಗಳ ಸುರಿಮಳೆ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾದ್ರಾ, ದಿನೇಶ್ ಗುಂಡೂರಾವ್, ಕೆ.ಜೆ ಜಾರ್ಜ್ ಸೇರಿದಂತೆ ಅನೇಕರ ವಿರುದ್ಧ ದೂರು ನೀಡಿದ್ದೇವೆ ಎಂದು ತಿಳಿಸಿದರು.
ವಂಚನೆ, ಭ್ರಷ್ಟಾಚಾರ, ಭೂ ಕಬಳಿಕೆ ಆಧಾರದ ಮೇಲೆ ದೂರು ಸಲ್ಲಿಕೆಯಾಗಿದ್ದು, ಕೃಷಿ ಭಾಗ್ಯ ಯೋಜನೆ ಅಡಿ ಸಿದ್ದರಾಮಯ್ಯ ಮತ್ತು ಕೃಷ್ಣ ಭೈರೇಗೌಡರು ಬೃಹತ್ ಹಗರಣ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಕೆ.ಜೆ ಜಾರ್ಜ್ ಸೇರಿ 40 ಕೋಟಿ ರೂ. ಬೃಹತ್ ಹಗರಣ ಮಾಡಿದ್ದಾರೆ. ಬಿಬಿಎಂಪಿ ಎಲ್ ಇಡಿ ಬೀದಿದೀಪ ಅಳವಡಿಕೆಯಲ್ಲಿ 1,600 ಹಗರಣ ಆಗಿದೆ. ಅದರ ವಿರುದ್ಧ ದೂರು ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ 7 ಪ್ರಕರಣಗಳು, ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ 4 ದೂರುಗಳು, ಮಾಜಿ ಸಚಿವ ಯು. ಟಿ. ಖಾದರ್, ಜಮೀರ್ ಅಹಮದ್ ಹಾಗೂ ಕೃಷ್ಣ ಭೈರೇಗೌಡ ವಿರುದ್ಧ ತಲಾ 2 ದೂರುಗಳು ಮತ್ತು ಮಾಜಿ ಸಚಿವ ಎಂ.ಬಿ. ಪಾಟೀಲ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಶಾಸಕರಾದ ಎನ್. ಎ. ಹ್ಯಾರೀಸ್ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ರವರುಗಳ ವಿರುದ್ಧ ತಲಾ 1 ದೂರುಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಈ ಕೂಡಲೇ ಸಿಐಡಿ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.










