ವಾಷಿಂಗ್ಟನ್ : ಚೀನಾದ ಬೇಹುಗಾರಿಕಾ ಬಲೂನು ಅಮೆರಿಕದ ಅಣ್ವಸ್ತ್ರ ತಾಣಗಳ ಮೇಲೆ ಹಾರಾಡುತ್ತಿವೆ ಎಂದು ಅಮೆರಿಕ ಹೇಳಿಕೊಂಡಿದೆ.
ಮಾಲ್ಮ್‌ಸ್ಟ್ರೋಮ್ ಏರ್ ಫೋರ್ಸ್ ಬೇಸ್ ನಲ್ಲಿರುವ ರಾಷ್ಟ್ರದ 3 ಪರಮಾಣು ಕ್ಷಿಪಣಿ ಉಡಾವಣಾ ಸೌಲಭ್ಯಗಳಲ್ಲಿ ಒಂದಾದ ಮೊಂಟಾನಾದಲ್ಲಿ ಬಲೂನು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬಲೂನು ಹೊಡೆದುರುಳಿಸಲು ನಿರ್ಧರಿಸಲಾಗಿತ್ತಾದರೂ ಜನರಿಗೆ ಇದರಿಂದ ತೊಂದರೆ ಆಗಬಹುದು ಎಂದು ಅದನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರದೇಶದ ಮೇಲೆ ಹಾರುತ್ತಿದ್ದ ಬಲೂನು ಚೀನಾಗೆ ಸೇರಿದ್ದಾಗಿದ್ದು, ಚೀನಾ ಅಮೆರಿಕ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಧಿಕಾರಿಗಳು ಶಂಕಿತ ಬೇಹುಗಾರಿಕಾ ಬಲೂನಿನ ಗಾತ್ರವನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ. ಮೂಲಗಳ ಪ್ರಕಾರ ಅದು ದೊಡ್ಡ ಗಾತ್ರದ್ದಾಗಿದ್ದು, ವಾಣಿಜ್ಯ ವಾಯು ಸಂಚಾರ ವ್ಯಾಪ್ತಿಗಿಂತಲೂ ಎತ್ತರದಲ್ಲಿ ಹಾರಾಡುತ್ತಿದೆ ಎನ್ನಲಾಗಿದೆ.










