ನಟ ಪುನೀತ್ ರಾಜ್ ಕುಮಾರ್ ನಿಧನದ ನಂತರದಲ್ಲಿ ಅವರನ್ನು ಬೇರೆ ಬೇರೆ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ರಸ್ತೆ, ವೃತ್ತ, ಪಾರ್ಕ್ ಗೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಇಡಲಾಗುತ್ತಿದೆ. ಇದೀಗ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು ಇಡುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದ್ದು, ಇಂದು ಪದ್ಮನಾಭನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ರಾಜ್ ಕುಮಾರ್ ರಸ್ತೆ ನಾಮಕರಣಕ್ಕೆ ಚಾಲನೆ ನೀಡಲಿದ್ದಾರೆ.
ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ ಪುನೀತ್ ಹೃದಯವಂತ ಮನುಷ್ಯ. ಬಡವರ ಬಗ್ಗೆ, ವಿದ್ಯಾರ್ಥಿಗಳ ಬಗ್ಗೆ, ಅನಾಥಾಶ್ರಮಗಳ ಬಗ್ಗೆ ಅವರಿಗಿದ್ದ ಕಾಳಜಿ ಬಹಳ ವಿಶಾಲವಾದದ್ದು. ಅವರ ನೆನಪು ಮುಂದಿನ ಪೀಳಿಗೆಗೂ ತಲುಪಬೇಕು ಎಂಬ ದೃಷ್ಟಿಯಿಂದ ನಾಯಂಡಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ಮೆಗಾ ಸಿಟಿ ಮಾಲ್ ಜಂಕ್ಷನ್ ವರೆಗಿನ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. 12 ಕಿಲೋ ಮೀಟರ್ ರಸ್ತೆಗೆ ಪುನೀತ್ ರಾಜ್ ಕುಮಾರ್ ರಸ್ತೆ ಎಂದು ಹೆಸರಿಡುತ್ತಿದ್ದೇವೆ ಎಂದರು.
ಇಂದು ಸಂಜೆ 6 ಗಂಟೆಗೆ ಪದ್ಮನಾಭನಗರದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ರಸ್ತೆ ನಾಮಕರಣ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿಗಳು ರಸ್ತೆ ನಾಮಕರಣ ಉದ್ಘಾಟನೆಯನ್ನು ಮಾಡಲಿದ್ದಾರೆ. ರಾಜ್ ಕುಮಾರ್ ಕುಟುಂಬ, ಸಚಿವರು, ಇಡೀ ಚಿತ್ರರಂಗದ ತಾರೆಯರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ತಿಳಿಸಿದ್ದಾರೆ.










