ಅಂಕಾರಾ : ಭೀಕರ ಭೂಕಂಪನದಿಂದ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಕಟ್ಟಡಗಳು ನೆಲಸಮಗೊಂಡಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಈವರೆಗೆ ದುರಂತದಲ್ಲಿ ಮಡಿದವರ ಸಂಖ್ಯೆ 7,900ಕ್ಕೆ ಏರಿದೆ.
ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿರುವವರ ರಕ್ಷಣೆ ಕಾರ್ಯಾಚರಣೆ ಮುಂದುವರಿದಿದೆ.
ಟರ್ಕಿಯೊಂದರಲ್ಲಿಯೇ ಮೃತರ ಸಂಖ್ಯೆ 5,894 ದಾಖಲಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಒಟ್ಟಾರೆ ಎರಡೂ ದೇಶಗಳಲ್ಲಿನ ಮರಣ ಪ್ರಮಾಣ 20,000 ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.
ಟರ್ಕಿಯಲ್ಲಿ ಮೊದಲ ಭೂಕಂಪನ ರಿಕ್ಟರ್ ಮಾಪನದಲ್ಲಿ 7.8ರಷ್ಟು ದಾಖಲಾಗಿತ್ತು. ಎರಡನೇ ಕಂಪನ 7.6 ತೀವ್ರತೆಯದ್ದಾಗಿದ್ದರೆ, ಮೂರನೆಯದ್ದು 6.0 ತೀವ್ರತೆ ಹೊಂದಿತ್ತು. ಈಗ ನಾಲ್ಕನೇ ಕಂಪನ 5.9ರಷ್ಟು ದಾಖಲಾಗಿದೆ.
ಭಾರತದಿಂದ ಟರ್ಕಿಗೆ ಭೂಕಂಪ ಪರಿಹಾರದ ಮೊದಲ ಬ್ಯಾಚ್ ವಸ್ತುಗಳು ರವಾನೆಯಾಗಿವೆ. ಇದರ ಜೊತೆಗೆ ಎನ್ ಡಿಆರ್ ಎಫ್ ಪತ್ತೆ ಹಾಗೂ ರಕ್ಷಣಾ ತಂಡಗಳು, ವಿಶೇಷ ಪರಿಣತ ಶ್ವಾನದಳ, ವೈದ್ಯಕೀಯ ಪೂರೈಕೆಗಳು, ಡ್ರಿಲ್ಲಿಂಗ್ ಯಂತ್ರಗಳು ಹಾಗೂ ಇತರೆ ಅಗತ್ಯ ಸಾಧನಗಳನ್ನು ಕಳುಹಿಸಲಾಗಿದೆ ಎಂದು ವಿಶೇಶಾಂಗ ಸಚಿವಾಲಯ ತಿಳಿಸಿದೆ.










