ಮತ್ತೆ ರೆಪೋ ದರ ಹೆಚ್ಚಿಸಿದ ಆರ್‌ಬಿಐ.

38
firstsuddi

ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ರೆಪೋ ದರವನ್ನು ಮತ್ತೆ ಹೆಚ್ಚಿಸಿದೆ.

ರೆಪೋ ದರವನ್ನು 25 ಮೂಲಾಂಶ ಅಂದರೆ, ಶೇ.6.50ಕ್ಕೆ ಹೆಚ್ಚಿಸಲು ಆರ್ ಬಿಐನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇಂದು ಹಣಕಾಸು ನೀತಿ ಪ್ರಕಟಿಸಿ, ರೆಪೋ ದರ ಹೆಚ್ಚಳ ಮಾಡಿರುವುದನ್ನು ಘೋಷಿಸಿದ್ದಾರೆ.

ಜಾಗತಿಕ ಆರ್ಥಿಕತೆಯು ಕೆಲವು ತಿಂಗಳುಗಳ ಹಿಂದೆ ಇದ್ದಂತೆ ಈಗ ಕಠಿಣವಾಗಿ ಕಾಣುತ್ತಿಲ್ಲ. ಹಣದುಬ್ಬರದ ನಡುವೆ ಪ್ರಮುಖ ಆರ್ಥಿಕತೆಗಳಲ್ಲಿನ ಬೆಳವಣಿಗೆಯ ನಿರೀಕ್ಷೆಗಳು ಸುಧಾರಿಸಿದೆ. ಆದರೂ ಹಣದುಬ್ಬರವು ಇನ್ನೂ ಪ್ರಮುಖ ಆರ್ಥಿಕತೆಗಳಲ್ಲಿ ಗುರಿಗಿಂತ ಉತ್ತಮವಾಗಿದೆ. 2023-24ರ 4ನೇ ತ್ರೈಮಾಸಿಕದಲ್ಲಿ ಹಣದುಬ್ಬರ ಸರಾಸರಿ 5.6% ಎಂದು ನಿರೀಕ್ಷಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.

ರಿಸರ್ವ್ ಬ್ಯಾಂಕ್ 2023-24ಕ್ಕೆ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6.4 ಎಂದು ನಿರೀಕ್ಷಿಸಿದೆ. 2023-24 ರ ನೈಜ ಜಿಡಿಪಿ ಬೆಳವಣಿಗೆಯು 6.4% ರಷ್ಟಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.8, ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 6.2, ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.8ರಷ್ಟು ನಿರೀಕ್ಷಿಸಲಾಗಿದೆ ಎಂದರು.

2022ರ ಡಿಸೆಂಬರ್ ನಲ್ಲಿ ಪ್ರಕಟಿಸಿದ ಹಣಕಾಸು ನೀತಿಯಲ್ಲಿ ಆರ್ ಬಿಐ ರೆಪೋ ದರವನ್ನು 35 ಮೂಲಾಂಶ ಹೆಚ್ಚಿಸಿ ಶೇಕಡಾ 6.25ಕ್ಕೆ ನಿಗದಿಪಡಿಸಿತ್ತು. ಪರಿಣಾಮವಾಗಿ ಸಾಲಗಳ ಮೇಲಿನ ಬಡ್ಡಿ ದರ, ಎಫ್ ಡಿ ಸೇರಿದಂತೆ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರಗಳನ್ನೂ ಬ್ಯಾಂಕ್ ಗಳು ಹೆಚ್ಚಿಸಿದ್ದವು. ಇದೀಗ ಮತ್ತೆ ರೆಪೋ ದರ ಹೆಚ್ಚಿಸಿರುವುದರಿಂದ ಗೃಹ, ವಾಹನ ಸಾಲ ಸೇರಿದಂತೆ ವಿವಿಧ ಸಾಲಗಳ ಬಡ್ಡಿ ದರ, ಇಎಂಐ ಮೊತ್ತ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.