ರಾಯಚೂರು : ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಅಧಿವೇಶನ ಬಳಿಕ 4 ಕಡೆಗಳಿಂದ ರಥಯಾತ್ರೆ ಆರಂಭಿಸುತ್ತೇವೆ. ಇಡೀ ರಾಜ್ಯ ಪ್ರವಾಸ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.
ರಾಯಚೂರಿನ ಸಿಂಧನೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯಡಿಯೂರಪ್ಪ ಮಾತನಾಡಿ, ತಾವೇ ಮುಖ್ಯಮಂತ್ರಿ ಅಂತ ಕಾಂಗ್ರೆಸ್ ನವರು ಓಡಾಡುತ್ತಿದ್ದಾರೆ. ಅದು ತಿರುಕನ ಕನಸು. ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯಗಳಿಗೆ ಸಿಎಂ ಬೊಮ್ಮಾಯಿ ಮಾಡಿದ ಕೆಲಸಗಳು ಪಕ್ಷಕ್ಕೆ ಶಕ್ತಿ ತಂದುಕೊಡುತ್ತದೆ. ಬಿಜೆಪಿ ಬಗ್ಗೆ ಜನರಿಗೆ ಒಲವು ಹೇಗಿದೆ ಅನ್ನೋದು ಈಗಾಗಲೇ ಗೊತ್ತಾಗಿದೆ ಎಂದರು.
ಯಡಿಯೂರಪ್ಪರನ್ನು ಪಕ್ಷದಲ್ಲಿ ಸೈಡ್ ಲೈನ್ ಮಾಡಲಾಗುತ್ತಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಾರ್ಟಿ ನನಗೆ ಎಲ್ಲವನ್ನೂ ಕೊಟ್ಟಿದೆ. ರಾಷ್ಟ್ರ ಮಟ್ಟದಲ್ಲೂ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಹೀಗಿರುವಾಗ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂಬ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ತಿಳಿಸಿದರು.
ಹೆಚ್.ಡಿ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಅವರಿಗೆ ಶೋಭೆ ತರುವಂತದ್ದಲ್ಲ, ಕುಮಾರಸ್ವಾಮಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.










