ನಾಳೆ ಮಂಗಳೂರಿಗೆ ಅಮಿತ್ ಶಾ ಭೇಟಿ…

40
firstsuddi

ಮಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಪ್ರಚಾರ ಕಾರ್ಯವನ್ನು ನಡೆಸುವ ಯಾವುದೇ ಸಣ್ಣ ಅವಕಾಶವೂ ತಪ್ಪಿಹೋಗಲು ಬಿಡುತ್ತಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಜಿದ್ದಿಗೆ ಬಿದ್ದವರಂತೆ ಕರ್ನಾಟಕಕ್ಕೆ ಬರುತ್ತಲೇ ಇದ್ದಾರೆ. ಹಿಂದಿನ ಭೇಟಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಲ್ಲಿ ಕೇಸರಿ ಕಹಳೆ ಮೊಳಗಿಸಿದ್ದ ಚುನಾವಣಾ ಚಾಣಕ್ಯ ಅಮಿತ್ ಶಾ ಪುತ್ತೂರು ಹಾಗೂ ಮಂಗಳೂರಿನಲ್ಲಿ ಒಂದು ದಿನದ ಪ್ರವಾಸ ನಡೆಸಲಿದ್ದಾರೆ.

ನಾಳೆ ಮಧ್ಯಾಹ್ನ 2:15ಕ್ಕೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿಂದ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಪುತ್ತೂರಿನ ಈಶ್ವರ ಮಂಗಲಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2:50ಕ್ಕೆ ಈಶ್ವರ ಮಂಗಲ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ಬಳಿಕ ಹೆಲಿಕಾಪ್ಟರ್ ಮೂಲಕ ಪುತ್ತೂರಿಗೆ ಬಂದಿಳಿಯಲಿದ್ದಾರೆ.

3.40ಕ್ಕೆ ಪುತ್ತೂರಿನ ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿರುವ ಅಮಿತ್ ಶಾ ಸಂಜೆ 6 ಗಂಟೆ ವೇಳೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಲಿದ್ದಾರೆ. ಸಂಜೆ 6.15ರಿಂದ ರಾತ್ರಿ 8 ಗಂಟೆಯವರೆಗೂ ಮಂಗಳೂರು ಏರ್ ಪೋರ್ಟ್ ಸಮೀಪ ಬಿಜೆಪಿ ಪ್ರಮುಖರೊಂದಿಗೆ ಅಮಿತ್ ಶಾ ಆಂತರಿಕ ಸಭೆ ನಡೆಸಲಿದ್ದಾರೆ. ಈ ಸಭೆ ಮುಕ್ತಾಯಗೊಂಡ ಬಳಿಕ ಅಮಿತ್ ಶಾ ದೆಹಲಿಗೆ ತೆರಳಲಿದ್ದಾರೆ.

ಇನ್ನು ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದ ನೆಪದಲ್ಲಿ ಮಂಗಳೂರಿನಲ್ಲಿ ಭರ್ಜರಿ ಪ್ರಚಾರ ಕಾರ್ಯವನ್ನು ನಡೆಸಬೇಕು ಅನ್ನೋದು ಬಿಜೆಪಿ ಪ್ಲಾನ್ ಆಗಿತ್ತು. ಹೀಗಾಗಿ ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಭಾಷಣ ಮಾಡಿದ ಬಳಿಕ ಅಮಿತ್ ಶಾ ಮಂಗಳೂರಿನಲ್ಲಿ ಬೃಹತ್ ರೋಡ್ ಶೋನಲ್ಲಿ ಭಾಗಿಯಾಗುವವರಿದ್ದರು. ಆದರೆ ರೋಡ್ ಶೋ ಮಾರ್ಗ ಮಧ್ಯದಲ್ಲಿಯೇ ಬರುವ ಪದವಿನಂಗಡಿಯಲ್ಲಿ ಕೊರಗಜ್ಜನ ಕೋಲ ನಡೆಯುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ರೋಡ್ ಶೋ ರದ್ದುಗೊಳಿಸಲಾಗಿದೆ.