ಕೆಂಗಲ್ ಸ್ಮಾರಕ ಸ್ಮೃತಿ ಉದ್ಯಾನವನವಾಗಿ ಅಭಿವೃದ್ಧಿ : ಸಿಎಂ ಬೊಮ್ಮಾಯಿ.

42
firstsuddi

ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ 115 ನೇ ಜನ್ಮದಿನಾಚರಣೆಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ಇಂದು ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದ 2ನೇ ಮುಖ್ಯಮಂತ್ರಿ, ಧೀಮಂತ ನಾಯಕ, ಕೇಂದ್ರ ರೈಲ್ವೆ ಸಚಿವ, ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೆಂಗಲ್ ಹನುಮಂತಯ್ಯನವರಿಗೆ ಇಂದು ಅವರ ಜನ್ಮದಿನದಂದು ಗೌರವಾರ್ಪಣೆ ಮಾಡಿದ್ದೇವೆ ಎಂದರು.

ಕೆಂಗಲ್ ಹನುಮಂತಯ್ಯ ಅವರ ಜೀವನ ಚರಿತ್ರೆಯನ್ನು ಒಗ್ಗೂಡಿಸಿ ಅಧಿಕೃತ ಗ್ರಂಥ ಸಿದ್ಧಪಡಿಸಿ ಈ ವರ್ಷ ಬಿಡುಗಡೆ ಮಾಡಲಾಗುವುದು. ಕೆಂಗಲ್ ನಲ್ಲಿರುವ ಅವರ ಸ್ಮಾರಕವನ್ನು ಸ್ಮೃತಿ ಉದ್ಯಾನವನ ಎಂದು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಅಗತ್ಯ ಅನುದಾನವನ್ನೂ ಒದಗಿಸಲಾಗುವುದು. ಅವರ ಸ್ಮರಣೆ ನಿರಂತರವಾಗಿರಲಿ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ರಾಮನಗರದಲ್ಲಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ನಿರ್ಮಾಣವಾಗುತ್ತಿದ್ದು, ಆದಷ್ಟು ಬೇಗನೆ ಪ್ರತಿಮೆ ಅನಾವರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು – ಮೈಸೂರು ರಸ್ತೆಯ ಮಾರ್ಗದ ಪ್ರಮುಖ ಸ್ಥಳದಲ್ಲಿ ಅವರ ಪ್ರತಿಮೆ ನಿರ್ಮಾಣಕ್ಕೆ ಬಿಬಿಎಂಪಿಯಲ್ಲಿ ಪ್ರಸ್ತಾವನೆ ಇದೆ. ಅದಕ್ಕೆ ಕೂಡಲೇ ಒಪ್ಪಿಗೆ ನೀಡಿ ಆ ಕೆಲಸವನ್ನು ಈ ವರ್ಷವೇ ಪ್ರಾರಂಭಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಸ್ಥಾಪನೆಯಾಗಲು, ಕನ್ನಡ ಮಾತನಾಡುವ ಎಲ್ಲಾ ಜನರನ್ನು ಒಗ್ಗೂಡಿಸಿದ ಪ್ರಮುಖರಲ್ಲಿ ಕೆಂಗಲ್ ಹನುಮಂತಯ್ಯ ಅವರು ಅಗ್ರಗಣ್ಯರು. ಮೈಸೂರಿನ ಪ್ರಜಾ ಪ್ರತಿನಿಧಿ ಸಭೆಯಿಂದ ಹಿಡಿದು ವಿಧಾನಸಭಾ ಸದಸ್ಯರು, ಲೋಕಸಭಾ ಸದಸ್ಯರಾಗಿ, ಕರ್ನಾಟಕದ ಪ್ರಾರಂಭಿಕ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಧೀಮಂತ ನಾಯಕರು. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ನೀಡಿ, ಕರ್ನಾಟಕದ ಅಭಿವೃದ್ಧಿಗೆ ಭದ್ರಬುನಾದಿಯನ್ನು ಹಾಕಿದವರು ಎಂದು ಹೇಳಿದರು.