ಮೋದಿ-ಮೋಹನ್ ಭಾಗವತ್​ಗೆ ಭಾರತ ಎಷ್ಟು ಸೇರಿದ್ದೋ, ಅಷ್ಟೇ ಮಹಮೂದ್‌ಗೂ ಸೇರಿದೆ : ಜಮೈತ್ ಉಲೇಮಾ ಎ ಹಿಂದ್ ಮುಖ್ಯಸ್ಥ

53
firstsuddi

ನವದೆಹಲಿ : ಭಾರತ ಮುಸ್ಲಿಮರ ಮೊದಲ ತಾಯ್ನಾಡು. ಪ್ರಧಾನಿ ಮೋದಿ ಮತ್ತು ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಭಾರತ ಎಷ್ಟು ಸೇರಿದ್ದೋ, ಅಷ್ಟೇ ಮಹಮೂದ್ ಗೂ ಸೇರಿದ್ದಾಗಿದೆ ಎಂದು ಜಮೈತ್ ಉಲೇಮಾ ಎ ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿದ್ದಾರೆ.

ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಜಮೈತ್ ಉಲೇಮಾ-ಎ-ಹಿಂದ್ ನ ಸಮಗ್ರ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಮೌಲಾನಾ ಮದನಿ, ಭಾರತ ನಮ್ಮ ದೇಶ. ಪ್ರಧಾನಿ ಮೋದಿ ಮತ್ತು ಮೋಹನ್ ಭಾಗವತ್ ಅವರಿಗೆ ಭಾರತದ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟೇ ಹಕ್ಕು ನಮಗೂ ಇದೆ. ಮಹಮೂದ್, ಅವರಿಗಿಂತ ಒಂದು ಇಂಚು ಮುಂದಿಲ್ಲ ಅಥವಾ ಮಹಮೂದ್‌ಗಿಂತ ಅವರು ಒಂದು ಇಂಚು ಮುಂದಿಲ್ಲ ಎಂದು ಹೇಳಿದರು.

ಮುಸ್ಲಿಮರಿಗೆ ಭಾರತ ಮೊದಲ ತಾಯ್ನಾಡು. ಭಾರತಕ್ಕೆ ಇಸ್ಲಾಂ ಧರ್ಮ ಹೊರಗಿನಿಂದ ಬಂದಿದೆ ಎಂಬುದು ಸುಳ್ಳು. ಅದು ಆಧಾರರಹಿತವಾಗಿದೆ. ಎಲ್ಲ ಧರ್ಮಗಳಿಗಿಂತ ಇಸ್ಲಾಂ ಧರ್ಮ ತುಂಬಾ ಹಳೆಯದು. ಆದ್ರೆ, ದೇಶದಲ್ಲಿ ದ್ವೇಷ ಭಾಷಣ ಮತ್ತು ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನೆ ನೀಡುವವರನ್ನು ಶಿಕ್ಷಿಸಲು ಪ್ರತ್ಯೇಕ ಕಾನೂನು ಜಾರಿಗೆ ತರಬೇಕು. ಇಸ್ಲಾಮೋಫೋಬಿಯಾ ಹೆಚ್ಚಳ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಮತ್ತು ಪ್ರಚೋದನೆಯ ಪ್ರಕರಣಗಳು ನಮ್ಮ ದೇಶದಲ್ಲಿ ಆತಂಕಕಾರಿ ಮಟ್ಟಕ್ಕೆ ಏರಿವೆ. ಇವೆಲ್ಲಕ್ಕೂ ಕಡಿವಾಣ ಹಾಕಬೇಕು ಎಂದು ಮಹಮೂದ್ ಮದನಿ ಒತ್ತಾಯಿಸಿದರು.