ಮೋದಿ ಔತಣಕೂಟದಲ್ಲಿ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಭಾಗಿ : ಫೋಟೋಗಳು ವೈರಲ್…

63
firstsuddi

ಇಂದಿನಿಂದ ಪ್ರಾರಂಭವಾದ ಐದು ದಿನಗಳ ಏರ್ ಶೋ 2023 ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ರಾತ್ರಿ ಸ್ಯಾಂಡಲ್‍ವುಡ್ ನ ನಟ-ನಟಿಯರನ್ನು ಭೇಟಿ ಮಾಡಿದರು.

ರಾತ್ರಿ 8.30ರ ನಂತರ ನಡೆದ ಔತಣಕೂಟದಲ್ಲಿ ನಟ ಯಶ್, ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕರಾದ ವಿಜಯ್ ಕಿರಗಂದೂರು ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್, ಹಾಗೂ ಮಾಜಿ ರೆಡಿಯೋ ಜಾಕಿ ಶ್ರದ್ಧಾ ಜೈನ್ ಅವರು ಭಾಗಿಯಾಗಿದ್ದರು. ಇದೇ ವೇಳೆ ಅನೌಪಚಾರಿಕವಾಗಿ ಕೆಲವೊತ್ತು ಅವರೊಂದಿಗೆ ಮಾತುಕತೆ ಸಹ ನಡೆಸಿದ್ದಾರೆ. ಸೆಲೆಬ್ರಿಟಿಗಳು ಅಷ್ಟೇ ಅಲ್ಲದೇ ಕೆಲವು ಉದ್ಯಮಿಗಳು ಹಾಗೂ ಕ್ರಿಕೆಟ್ ತಾರೆಯರನ್ನೂ ಸಹ ಮೋದಿ ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ.

ನಿನ್ನೆ ನಡೆದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡ ಚಿತ್ರೋದ್ಯಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನ್ನಡ ಚಿತ್ರೋದ್ಯಮವು ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹಾಡಿಹೊಗಳಿದ್ದಾರೆ. ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ತಮ್ಮ ಸರ್ಕಾರ ಎಲ್ಲ ರೀತಿಯ ಸಹಾಯವನ್ನು ನೀಡಲಿದೆ ಎಂದು ಸಹ ಹೇಳಿದ್ದಾರೆ.

ಕನ್ನಡ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿರುವ ನಟ ಯಶ್ ಮತ್ತು ರಿಷಬ್ ಶೆಟ್ಟಿ ಜೊತೆಯೂ ಪ್ರಧಾನಿ ಮೋದಿ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ. ಇಬ್ಬರ ಕಲಾಪ್ರೌಢಿಮೆಯನ್ನು ಮೆಚ್ಚಿ ಮಾತನಾಡಿದ್ದಾರೆ. ಇನ್ನಷ್ಟು ಕೀರ್ತಿಗಳಿಸುವಂತೆ ಇಬ್ಬರಿಗೂ ಬೆನ್ನು ತಟ್ಟಿ ಶುಭ ಹಾರೈಸಿದ್ದಾರೆ.