ಮುಂಬೈ : ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ ನಡೆದ ಘಟನೆ ನಿನ್ನೆ ಮುಂಬೈನ ಚೆಂಬೂರು ಎಂಬಲ್ಲಿ ನಡೆದಿದೆ.
ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮದಲ್ಲೇ ಉದ್ಧವ್ ಠಾಕ್ರೆ ಬಣದ ಶಾಸಕ ಪ್ರಕಾಶ್ ಫತೇರ್ ಪೇಕರ್ ಅವರ ಪುತ್ರ ಕೂಡ ಪಾಲ್ಗೊಂಡಿದ್ದರು. ಸೆಲ್ಫಿ ತಗೆಯುವ ವಿಚಾರವಾಗಿ ಗಲಾಟೆ ನಡೆದಿದೆ. ಸೋನು ನಿಗಮ್ ಅಂಗರಕ್ಷಕರು, ಶಾಸಕರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವೇಳೆ ಸೋನು ನಿಗಮ್ ಸೇರಿ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆಯ ನಂತರ ಗಾಯಕ ಸೋನು ನಿಗಮ್ ಚೆಂಬೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯನ್ನು ನೆನಪಿಸಿಕೊಂಡ ಗಾಯಕ ಸೋನು ನಿಗಮ್, ಸಂಗೀತ ಕಾರ್ಯಕ್ರಮದ ನಂತರ ನಾನು ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ವ್ಯಕ್ತಿಯೊಬ್ಬರು ನನ್ನನ್ನು ಹಿಡಿದಿದ್ದರು. ನಂತರ ಬಂದ ನನ್ನ ಅಂಗರಕ್ಷಕ ಹರಿ ಮತ್ತು ರಬ್ಬಾನಿ ಅವರನ್ನು ತಳ್ಳಿದ್ದಾರೆ, ನಂತರ ನಾನು ಮೆಟ್ಟಿಲುಗಳ ಮೇಲೆ ಬಿದ್ದೆ. ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲು ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.










