ಪರೇಶ್ ಮೇಸ್ತಾ ಹತ್ಯೆ ಪ್ರಕರಣ : 122 ಜನರ ವಿರುದ್ಧ ದಾಖಲಾಗಿದ್ದ ಕೇಸ್ ವಾಪಸ್…

56
firstsuddi

ಕಾರವಾರ: ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ಪರೇಶ್ ಮೇಸ್ತಾ ಕೊಲೆ ಗಲಭೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರೇಶ್ ಮೇಸ್ತಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಈ ಸಾವಿನ ಬಳಿಕ ಇಡೀ ಜಿಲ್ಲೆಯಲ್ಲಿ ಈ ಹತ್ಯೆ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಇದೊಂದು ಕೊಲೆ ಎಂದು ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಆರೋಪಿಸಿದ್ದವು. ಹತ್ಯೆ ಖಂಡಿಸಿ ಆಗಿನ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಸದ್ಯ ಈಗ ಶಿರಸಿಯಲ್ಲಿ ನಡೆದಿದ್ದ ಗಲಭೆಯಲ್ಲಿ 122 ಜನರ ಮೇಲಿದ್ದ ಮೂರು ಪ್ರಕರಣವನ್ನು ಹಿಂಪಡೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ 26 ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿತ್ತು. ಈಗ ಮತ್ತೆ 112 ಜನರ ಮೇಲೆ ಉಳಿದಿದ್ದ ಮೂರು ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಅಂದಿನ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಕಾರ್ಯಕರ್ತರು, ಬಜರಂಗದಳ ಕಾರ್ಯಕರ್ತರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು. ಈಗ 112 ಜನರ ಪ್ರಕರಣ ಹಿಂಪಡೆದು ಆದೇಶ ಹೊರಡಿಸಲಾಗಿದ್ದು ಸರ್ಕಾರಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದ್ದಾರೆ.

ಪರೇಶ್ ಮೇಸ್ತಾ ಯಾರು? : ಪರೇಶ್ ಮೇಸ್ತಾ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಮಲಾಕರ ಮೇಸ್ತಾ ಎಂಬ ಮೀನುಗಾರರ ಕುಟುಂಬದ ಯುವಕ. 2017ರ ಡಿಸೆಂಬರ್ ವೇಳೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹೊನ್ನಾವರದ ಗುಡ್ ಲಕ್ ವೃತ್ತದಲ್ಲಿ ಕೋಮ ಗಲಭೆ ನಡೆದಿತ್ತು. ಈ ವೇಳೆ ಪಟ್ಟಣದ ತುಳುಸಿ ನಗರದ ಪರೇಶ್ ಮೇಸ್ತಾ ಎನ್ನುವ ಮೀನುಗಾರ ಯುವಕ ನಾಪತ್ತೆಯಾಗಿದ್ದ. ಎರಡು ದಿನಗಳ ನಂತರ ಹೊನ್ನಾವರದ ಶೆಟ್ಟಿಕೆರೆಯಲ್ಲಿ ಪರೇಶ್ ಮೇಸ್ತಾನ ಶವ ಪತ್ತೆಯಾಗಿತ್ತು.

ಪರೇಶ್ ಮೇಸ್ತಾ ಹತ್ಯೆ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಬೇಕೆಂದು ಅಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ತೀವ್ರ ಒತ್ತಡಕ್ಕೆ ತಲೆಬಾಗಿದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.

ಬಿ ರಿಪೋರ್ಟ್ ಸಲ್ಲಿಸಿದ ಸಿಬಿಐ : ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಸಿಬಿಐ ಅಧಿಕಾರಿಗಳು, ಪರೇಶ್ ಮೇಸ್ತಾ ಹತ್ಯೆ ನಡೆದಿಲ್ಲ, ಬದಲಾಗಿ ಆತನದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಸದ್ಯ ಸಿಬಿಐ ಸಲ್ಲಿಸಿರುವ ವರದಿಯನ್ನು ಹೊನ್ನಾವರ ಕೋರ್ಟ್ ಪರಿಶೀಲಿಸಿದೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ನವೆಂಬರ್ 16ಕ್ಕೆ ಕೋರ್ಟ್ ತೀರ್ಪು ನೀಡಲಿದೆ.